ಕಾರ್ಕಳ: ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ
ಕಾರ್ಕಳ ಸೆ.1: ಮಾಳ ಗ್ರಾಮ ಪಂಚಾಯತ್ ನಲ್ಲಿ ಇಂದು ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು. ಪಂಚಾಯತ್ ಕಚೇರಿಯಲ್ಲಿ ಕುಂದಾಪುರ ಉಪವಿಭಾಗದ ಎಸಿ ರಾಜು ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಅವಿಶ್ವಾಸ ಮಂಡನೆಯಲ್ಲಿ 14 ಮಂದಿ ಸದಸ್ಯರು ಭಾಗವಹಿಸಿದ್ದರು.
ಈ ಪೈಕಿ 10 ಮಂದಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ವಿರುದ್ಧ ಮತ ಚಲಾಯಿಸಿದರೆ, ನಾಲ್ವರು ಮಲ್ಲಿಕಾ ಅವರ ಪರವಾಗಿ ಮತ ಚಲಾಯಿಸಿದರು. ಅವಿಶ್ವಾಸ ಮಂಡನೆಯಲ್ಲಿ ಸದಸ್ಯೆ ತಾರಾ ಗೈರು ಹಾಜರಾಗಿದ್ದರು ಎಂದು ತಿಳಿದು ಬಂದಿದೆ. ಮಾಳ ಗ್ರಾ.ಪಂ. 15 ಮಂದಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಹೊಂದಿದ್ದು, ಎರಡನೇ ಬಾರಿಗೆ ಸದಸ್ಯೆಯಾಗಿರುವ ಮಲ್ಲಿಕಾ ಶೆಟ್ಟಿ ಅವರನ್ನು 2021 ಫೆಬ್ರವರಿಯಲ್ಲಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಪಂಚಾಯತ್ ಆಡಳಿತಕ್ಕೆ ಸಂಬಂಧಿಸಿದಂತೆ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಅವರು ಗ್ರಾ.ಪಂ. ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಳೆದ ಒಂದು ವರ್ಷದಿಂದ ಅನೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಕುರಿತು ಬಿಜೆಪಿ ಪ್ರಮುಖರಿಗೂ ದೂರು ನೀಡಿದ್ದರು. ಈ ವಿಚಾರವಾಗಿ ಸಮಸ್ಯೆ, ಭಿನ್ನಾಭಿಪ್ರಾಯ ಬಗೆಹರಿಸುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಸಾಕಷ್ಟು ಪ್ರಯತ್ನಪಟ್ಟರೂ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮಲ್ಲಿಕಾ ಅವರಿಗೆ ರಾಜಿನಾಮೆ ನೀಡುವಂತೆ ಬಿಜೆಪಿ ಕ್ಷೇತ್ರಾಧ್ಯಕ್ಷರು ಸೂಚಿಸಿದ್ದರು. ಆದರೆ ಮಲ್ಲಿಕಾ ಅವರು ರಾಜೀನಾಮೆ ನೀಡಿರಲಿಲ್ಲ. ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸುಮಾರು 10 ಬಾರಿ ಸಭೆ ನಡೆಸಲಾಗಿತ್ತು ಎನ್ನಲಾಗಿದೆ. ಸದ್ಯ ಮಲ್ಲಿಕಾ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.