ಮಾದಕ ವಸ್ತು ಮಾರಾಟ, ಬಳಸುವವರಿಗೆ ಜಮಾಅತ್‌ನ ಸದಸ್ಯತ್ವದಿಂದ ಹೊರಗೆ

ಕಾಸರಗೋಡು ಸೆ.1: ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಹಾಗೂ ಬಳಸುವರನ್ನು ಜಮಾಅತ್‌ನ ಪ್ರಾಥಮಿಕ ಸದಸ್ಯತ್ವದಿಂದ ಹೊರಗೆ ಇಡಲು ಕಾಸರಗೋಡಿನ ಪಾಡನ್ನಕ್ಕಾವ್ ಮುಹಿಯುದ್ದೀನ್‌ ಜುಮಾ ಮಸೀದಿಯ ಮೊಹಲ್ಲಾ ಕಮಿಟಿ ತೀರ್ಮಾನಿಸಿದೆ.

ಇಲ್ಲಿನ  ಕಾಞಂಗಾಡ್‌ ಪಾಡನ್ನಕ್ಕಾವ್ ಮುಹಿಯುದ್ದೀನ್‌ ಜುಮಾ ಮಸೀದಿಯ ಮೊಹಲ್ಲಾ ಕಮಿಟಿಯಲ್ಲಿ ಸುಮಾರು 580 ಜಮಾಅತ್‌ಗೆ ಒಳಪಟ್ಟ ಕುಟುಂಬಗಳಿದ್ದು, ಈ ಪೈಕಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು, ಹಾಗೂ ಅದನ್ನು ಬಳಸುವವರನ್ನು ಜಮಾಅತ್‌ನ ಪ್ರಾಥಮಿಕ ಸದಸ್ಯತ್ವದಿಂದ ಹೊರಗಿಡುವ ಜೊತೆಗೆ ಅಂತವರ ವಿವಾಹ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಮಸೀದಿಯ ಕಮಿಟಿ ಯಾವುದೇ ರೀತಿಯ ಸಹಕಾರ ನೀಡದಿರಲೂ ನಿರ್ಧರಿಸಿದೆ.

ಇನ್ನು ಪಾಡನ್ನಕ್ಕಾವ್ ಮೊಹಲ್ಲಾ ಕಮಿಟಿ ವತಿಯಿಂದ ಮಾದಕ ವಸ್ತುಗಳ ದುಷ್ಪರಿಣಾಮ, ಜಾಗೃತಿ ಶಿಬಿರಗಳನ್ನು  ನಡೆಸಲಾಗುತ್ತಿದ್ದು, ಕಾಸರಗೋಡು ಜಿಲ್ಲಾ ಪೊಲೀಸ್‌, ಕಾಞಂಗಾಡ್‌ ಡಿವೈಎಸ್ಪಿ ಹಾಗೂ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ. ಮಾತ್ರವಲ್ಲದೆ ಮೊಹಲ್ಲಾ ಕಮಿಟಿಯ ಈ ತೀರ್ಮಾನಕ್ಕೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಪಾಡನ್ನಕ್ಕಾವ್ ಮೊಹಲ್ಲಾ ಕಮಿಟಿಯು ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಅವನ್ನು ಉಪಯೋಗಿಸುವವರ ವಿರುದ್ಧ ತೆಗೆದುಕೊಂಡಿರುವ ತೀರ್ಮಾನವು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಕಾಸರಗೋಡು ಜಿಲ್ಲಾ ಪೊಲೀಸ್‌ ಅಧಿಕಾರಿ ಡಾ. ವೈಭವ್‌ ಸಕ್ಸೇನ ಐಪಿಎಸ್‌ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವೊಂದು “ಕ್ಲೀನ್‌ ಕಾಸರಗೋಡು” ಎಂಬ ಹೆಸರಿನಲ್ಲಿ ಕಾರ್ಯಾರಣೆ ನಡೆಸುತ್ತಿದೆ. ಇದು ಮಾದಕ ವಸ್ತುಗಳನ್ನು ಉಪಯೋಗಿಸುತ್ತಿರುವವರ ವಿರುದ್ಧ ನಡೆಸುತ್ತಿರುವಂತಹ ಕಾರ್ಯಾಚರಣೆಯಾಗಿದೆ.

Leave a Reply

Your email address will not be published. Required fields are marked *

error: Content is protected !!