ಸೂಕ್ತ ವ್ಯವಸ್ಥೆ ಕಲ್ಪಿಸಿ ಇಲ್ಲವಾದರೆ 8 ಕುಟುಂಬವು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುವೆವು

ಸುಳ್ಯ, ಸೆ.1: ತಾಲೂಕಿನ ಕೊಯನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸಂತ್ರಸ್ತರನ್ನು ಭೇಟಿ ಆಗಲು ಬಂದ ಶಾಸಕ ಬೋಪಯ್ಯರ ಎದುರೇ ಆಕ್ರೋಶ ವ್ಯಕ್ತಪಡಿಸಿರುವ ಸಂತ್ರಸ್ತರು, ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಇಲ್ಲವಾದರೆ ಕುಟುಂಬ ಸಮೇತ ಪತ್ರ ಬರೆದಿಟ್ಟು ಇದೇ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸ್ಥಳದಲ್ಲಿ ಶಾಸಕರು ಒಂದು ಹಂತದಲ್ಲಿ ಜನರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರಾದರೂ ಅಲ್ಲಿಯ ನಿರಾಶ್ರಿತರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೆ ತೆರಳಿದರು. ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು ಜನರನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಈ ವೇಳೆ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಭೇಟಿಯಾಗಲು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರು ಆಗಮಿಸಿದ್ದರು. 

ಈ ವೇಳೆ ಶಾಸಕರಲ್ಲಿ ನೋವು ತೋಡಿಕೊಂಡ ಅವರು ಕಿಂಡಿ ಅಣೆಕಟ್ಟು ಮಾಡುವಾಗ ನಮ್ಮ ಅಭಿಪ್ರಾಯ ಕೇಳಿಲ್ಲ. ಈಗ ಸಮಸ್ಯೆ ಆಗಿರುವುದು ನಮಗೆ. ಇದೊಂದು ಪ್ರಕೃತಿ ವಿಕೋಪದಿಂದ ಆಗಿದ್ದರೆ ಯಾವುದೇ ಸಮಸ್ಯೆಯಿರಲಿಲ್ಲ, ಇದು ಮಾನವ ನಿರ್ಮಿತ ವಿಕೋಪವಾಗಿದೆ, ನಮ್ಮನ್ನು ನೀವೆಲ್ಲ ಸೇರಿ ನಿರಾಶ್ರಿತರಾಗಿ ಮಾಡಿದ್ದೀರಿ ಎಂದು ಅಳಲು ತೋಡಿಕೊಂಡರು.

ಮುಖ್ಯಮಂತ್ರಿ ಸೇರಿ ಹಲವು ಸಚಿವರು ಬಂದು ಹೋದರು, ಯಾರಿಂದಲೂ ಪರಿಹಾರ ದೊರಕಿಲ್ಲ, ನೀವು ಕೂಡ ನಮ್ಮ ಸಮಸ್ಯೆಯನ್ನು ಕೇಳುವ ಪರಿಸ್ಥಿತಿಯಲ್ಲಿಲ್ಲ. ನಾವು ಮತ್ತು ಕುಟುಂಬಸ್ಥರೆಲ್ಲರೂ ಇದೇ ಕಿಂಡಿ ಆಣೆಕಟ್ಟುವಿನಿಂದ ಹಾರಿ ಆತ್ಮಹತ್ಯೆ ಮಾಡುತ್ತೇವೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!