ಕೊಡಗು: ಭಾರಿ ಭೂಕಂಪನ ಭವಿಷ್ಯ, ಬ್ರಹ್ಮಾಂಡ ಗುರೂಜಿ ವಿರುದ್ಧ ದೂರು

ಗೋಣಿಕೊಪ್ಪಲು: ಕೊಡಗು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರಿ ಭೂಕಂಪನ ಸಂಭವಿಸಿ, ಜಿಲ್ಲೆಯೇ ನೆಲಸಮವಾಗಲಿದೆ ಎಂದು ಭವಿಷ್ಯ ನುಡಿದಿದ್ದ ಬ್ರಹ್ಮಾಂಡ ಗುರೂಜಿ ವಿರುದ್ಧ ಶ್ರೀಮಂಗಲ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. 
ಸಮಾಜದಲ್ಲಿ ಆತಂಕ ಸೃಷ್ಟಿಸಿರುವ ಹೇಳಿಕೆ ನೀಡಿರುವ ಗುರೂಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ, ಕೊಡಗು ಬೆಳೆಗಾರರ ಒಕ್ಕೂಟವು ಪೊಲೀಸರಿಗೆ ದೂರು ನೀಡಿದೆ.   

ಗುರೂಜಿ ಎಂದು ಹೇಳಿಕೊಂಡಿರುವ ವ್ಯಕ್ತಿಯು ಯಾವ ಆಧಾರದಲ್ಲಿ ಭವಿಷ್ಯ ನುಡಿದಿದ್ದಾರೆ? ಕೊಡಗಿನಲ್ಲಿ ಭಾರಿ ಭೂಕಂಪನವಾಗಿ ನೆಲಸಮವಾಗಲಿದೆ ಎಂದು ಹೇಳಿರುವುದರಿಂದ ಕೊಡಗಿನ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಒಂದು ವೇಳೆ ಆ ಗುರೂಜಿ ನುಡಿದಿರುವ ಭವಿಷ್ಯವನ್ನು ಸರ್ಕಾರವೇ ನಂಬುವುದಾದರೆ ಯಾವ ದಿನ? ಯಾವ ಸಮಯದಲ್ಲಿ ಭೂಕಂಪನ ಸಂಭವಿಸಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸರ್ಕಾರವು ವೈಜ್ಞಾನಿಕ ಆಧಾರದ ಮೇಲೆ ವಿಶ್ಲೇಷಿಸಬೇಕು. ಸರ್ಕಾರವು ಅಧಿಕೃತವಾಗಿ ನಂಬಿದರೆ ಆತಂಕದಲ್ಲಿರುವ ಜನರಿಗೆ ಸುರಕ್ಷಿತ ಜಾಗಗಳಿಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಬೇಕು ಬೆಳೆಗಾರರು ಆಗ್ರಹಿಸಿದ್ದಾರೆ. 

ಸತತ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪ, ಪ್ರವಾಹದಿಂದ ನಲುಗಿರುವ ಜಿಲ್ಲೆಯ ಜನರು ಈ ಭವಿಷ್ಯದಿಂದ ಮತ್ತಷ್ಟು ಆತಂಕದಲ್ಲಿದ್ದಾರೆ ಎಂದು ಬೆಳೆಗಾರರು ನೋವು ತೋಡಿಕೊಂಡಿದ್ದಾರೆ.

ಈತ ಹೇಳಿರುವುದು ಸುಳ್ಳಾದರೆ ಅಥವಾ ಮೂಢನಂಬಿಕೆಯಾದರೆ ಸ್ವಯಂ ಘೋಷಿತ ಬ್ರಹ್ಮಾಂಡ ಗುರೂಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!