ಇಂದ್ರಾಳಿ ಯಕ್ಷಗಾನ ಕೇಂದ್ರಕ್ಕೆ ಗುರು ಸಂಜೀವ ಸುವರ್ಣ ರಾಜಿನಾಮೆ
ಉಡುಪಿ ಸೆ.1: ಹಲವು ದಶಕಗಳಿಂದ ಇಂದ್ರಾಳಿಯ ಯಕ್ಷಗಾನ ಕೇಂದ್ರದ ಗುರು (ಪ್ರಾಂಶುಪಾಲ)ಗಳಾಗಿದ್ದ ಸಂಜೀವ ಸುವರ್ಣ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಸಂಸ್ಥೆಯ ಅಧಿಕಾರಿಗಳೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುತ್ತಾರೆ ಸಂಜೀವ ಸುವರ್ಣರ ಶಿಷ್ಯರು. ಹಾಗೂ ಮನೆಯಲ್ಲಿ ಸಣ್ಣಪುಟ್ಟ ಭಿನ್ನಮತಗಳು ಇರುತ್ತವೆ, ಅದನ್ನು ಸರಿಪಡಿಸಿ ಸುವರ್ಣರನ್ನು ಗುರುಗಳಾಗಿ ಮುಂದುವರಿಸಬೇಕು ಎನ್ನುವ ಅವರ ಶಿಷ್ಯರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸುತ್ತಿದ್ದಾರೆ. ಆದರೆ ಸುವರ್ಣ ಅವರ ರಾಜಿನಾಮೆ ಈಗಾಗಲೇ ಸ್ವೀಕೃತವಾಗಿದೆ ಎಂದು ತಿಳಿದು ಬಂದಿದೆ.
ಜ್ಞಾನಪೀಠ ಶಿವರಾಮ ಕಾರಂತರು ಮಣಿಪಾಲದ ಮಾಹೆ ವಿ.ವಿ.ಯ ಸಹಯೋಗದಲ್ಲಿ ಸ್ಥಾಪಿಸಿದ ಯಕ್ಷಗಾನ ಕೇಂದ್ರದ ಗುರುಗಳಾಗಿ ಸುಮಾರು 35 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು. ಇವರು ತಮ್ಮ ಅಧಿಕಾರದ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳು ಮಾತ್ರವಲ್ಲ ಹತ್ತಾರು ದೇಶಗಳ ಆಸಕ್ತರೂ ಸೇರಿದಂತೆ ಸಾವಿರಕ್ಕೂ ಅಧಿಕ ಮಂದಿಗೆ ಶಾಸ್ತ್ರೀಯವಾಗಿ ಯಕ್ಷಗಾನವನ್ನು ಗುರುಕುಲ ಪದ್ಧತಿಯಲ್ಲಿ ಕಲಿಸಿದ್ದರು.
ಸಂಜೀವ ಸುವರ್ಣ ಅವರು, ಚಿಕ್ಕಮಕ್ಕಳಿಂದ ಹಿಡಿದು ನಿವೃತ್ತರಿಗೂ ಯಕ್ಷಗಾನ ಕಲಿಸಿದ್ದಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ, ರಾಜಕಾರಣಿಗಳು, ಉದ್ಯಮಿಗಳು, ವೈದ್ಯರು, ಮಹಿಳೆಯರು ಹೀಗೆ ಯಾರು ಬಂದು ಕೇಳಿದರೂ ಉಚಿತವಾಗಿ ಯಕ್ಷಗಾನ ಕಲಿಸಿದ್ದಾರೆ. ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷಗಾನ ಹೇಳಿಕೊಟ್ಟಿದ್ದಾರೆ. ಬುದ್ಧಿಮಾಂದ್ಯ ಮಕ್ಕಳಿಗೂ ಯಕ್ಷಗಾನ ಹೇಳಿಕೊಟ್ಟು ಪ್ರದರ್ಶಿಸುವಂತೆ ಮಾಡಿದ್ದಾರೆ.
ಇತ್ತ ತಮ್ಮ ರಾಜಿನಾಮೆಯ ಬಗ್ಗೆ ಸಂಜೀವ ಸುವರ್ಣ ಅವರು ಮೌನವಾಗಿದ್ದಾರೆ. ಅವರ ಈ ಹಠಾತ್ ರಾಜಿನಾಮೆಯ ನಿರ್ಧಾರದಿಂದ ಅವರ ಶಿಷ್ಯ ಬಳಗಕ್ಕೆ ಬಹಳ ನೋವಾಗಿದೆ.