ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಧಾಕೃಷ್ಣ ಆಚಾರ್ ನಿಧನ
ಉಡುಪಿ: ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಧಾಕೃಷ್ಣ ಆಚಾರ್ (83) ಇಂದು ನಿಧನರಾಗಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮೂರು ದಶಕಗಳಿಗೂ ಮಿಕ್ಕಿ ವಿದ್ಯಾರ್ಥಿಗಳ ಅತ್ಯಂತ ಅಚ್ಚುಮೆಚ್ಚಿನ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಬಳಿಕ ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ಸಲ್ಲಿಸಿದ್ದರು.
ಪ್ರಸ್ತುತ ಎಸ್.ವಿ.ಎಸ್.ಟಿ ಪ್ರೌಢಶಾಲೆ ಕಿದಿಯೂರು ಹಾಗೂ ಅಂಬಲಪಾಡಿ-ಕಿದಿಯೂರು ವಿದ್ಯಾಸಮುದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಚಾಲಕರಾಗಿದ್ದರು. ವಿ.ಆರ್.ಕಿದಿಯೂರ್ ರವರು ಸ್ಥಾಪಿಸಿದ ಕಿದಿಯೂರು ನಾಗಲಕ್ಷ್ಮೀ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿಯಾಗಿ ಕಳೆದ 2 ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಅದಮಾರು ಶ್ರೀ ವಿಬುಧೇಶತೀರ್ಥ ಶ್ರೀಪಾದರ ಒಡನಾಡಿಯಾಗಿ, ನಿವೃತ್ತ ಜೀವನದ ನಂತರವೂ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಸುಮಾರು 15 ವರ್ಷಗಳಿಂದ ಶ್ರೀಅದಮಾರು ಮಠ ಗೆಸ್ಟ್ ಹೌಸ್, ಶ್ರೀ ವಿಬುಧೇಶ ತೀರ್ಥ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಶ್ರೀ ವಿಬುಧೇಶತೀರ್ಥ ಶ್ರೀಪಾದರು, ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪ್ರಸ್ತುತ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಅವಧಿಯಲ್ಲಿಯೂ ಟ್ರಸ್ಟಿನ ಉಪಾಧ್ಯಕ್ಷರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ಶ್ರೀಪಾದತ್ರಯರಿಗೆ ಆಪ್ತರಾಗಿದ್ದರು.
ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದ ಸರಳ ಸ್ವಭಾವದ ರಾಧಕೃಷ್ಣ ಆಚಾರ್ಯರ ಅಗಲಿಕೆ ಸಮಾಜಕ್ಕೆ ಬಹುದೊಡ್ಡ ನಷ್ಟ. ಅಗಲಿದ ಸರಳ ಸಜ್ಜನಿಕೆಯ ಮೂರ್ತಸ್ವರೂಪರಾದ ರಾಧಕೃಷ್ಣ ಆಚಾರ್ಯ ಇವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲೆಂದು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸಿದ್ದಾರೆ
ಹಲವಾರು ಸಾಮಾಜಿಕ, ಶೈಕ್ಷಣಿಕ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಪ್ರೋ. ರಾಧಾಕೃಷ್ಣ ಆಚಾರ್ ರವರು ನಿಧನರಾಗಿದ್ದು ಅತೀವ ನೋವನ್ನುಂಟು ಮಾಡಿದೆ, ಅವರ ಅಗಲಿದ ಆತ್ಮಕ್ಕೆ ಚಿರಶಾಂತಿಗಾಗಿ ಹಾಗೂ ಸದ್ಗತಿಗಾಗಿ ಪ್ರಾರ್ಥಿಸಿ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸುತ್ತೇನೆಂದು ಮಾಜಿ ಸಚಿವ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಸಂತಾಪ ಸೂಚಿಸಿದ್ದಾರೆ.
ಪೂರ್ಣಪ್ರಜ್ಞ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಬಿ.ಎಂ.ಸೋಮಯಾಜಿ, ಕಾರ್ಯದರ್ಶಿ ತೇಜಸ್ವಿ ಶಂಕರ್, ಪ್ರಾಂಶುಪಾಲ ಡಾ.ಎ.ರಾಘವೇಂದ್ರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.