ರವಿ ಕಟಪಾಡಿ ಜಿಲ್ಲೆಗೆ ಹೆಮ್ಮೆ- ಜಿಲ್ಲಾಧಿಕಾರಿ ಕೂರ್ಮಾ ರಾವ್
ಉಡುಪಿ: ಕಳೆದ ಎಂಟು ವರ್ಷಗಳಿಂದ ಉಡುಪಿ ಶ್ರೀ ಕೃಷ್ಣಾಷ್ಟಮಿಗೆ ವೇಷ ಹಾಕಿ ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಒಟ್ಟು 1.04 ಕೋಟಿ ರೂಪಾಯಿ ಹಣವನ್ನು ಬಡಮಕ್ಕಳ ಚಿಕಿತ್ಸೆಗೆ ವಿನಿಯೋಗಿಸುವ ಮೂಲಕ ಬಡವರ ಸೇವೆ ಮಾಡುವ ಸೆಂಟ್ರಿಂಗ್ ಕೆಲಸದ ರವಿ ಕಟಪಾಡಿ ಅವರದ್ದು ಅಪ್ರತಿಮ ಸಾಧನೆಯಾಗಿದೆ. ರವಿ ಕಟಪಾಡಿ ಜಿಲ್ಲೆಗೆ ಹೆಮ್ಮೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.
ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಅತ್ಯಧಿಕ ಧನಸಂಪತ್ತು ಉಳ್ಳವರು ಮಾಡಬೇಕಾದ ಕಾರ್ಯವನ್ನು ಬಡತನದಲ್ಲಿರುವ ರವಿ ಕಟಪಾಡಿ ಮಾಡುತ್ತಿರುವುದು ನಿಜವಾದ ಸಮಾಜ ಸೇವೆ ಎಂದರು.
ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕ ಅಕ್ಷಯ್ ಮಚ್ಚೀಂದ್ರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ರವೀಂದ್ರ ಹೆಗ್ಡೆ,ಯಜ್ಞೇಶ್ ಬರ್ಕೆ,ಹರಿಶ್ಚಂದ್ರ ಪಿಲಾರ್, ಮಹೇಶ್ ಶೆಣೈ, ರವಿ ತಾಯಿ ದೇಯಿ ಉಪಸ್ಥಿತರಿದ್ದರು.
ಕಳೆದ ಏಳು ವರ್ಷ ಗಳಲ್ಲಿ ಒಟ್ಟು 90 ಲಕ್ಷ ರೂಪಾಯಿ ಸಂಗ್ರಹಿಸಿ ಎಲ್ಲವನ್ನೂ ಉಡುಪಿ ಜಿಲ್ಲೆಯ ವಿವಿಧೆಡೆಯ ಒಟ್ಟು 66 ಮಂದಿ ಮಕ್ಕಳ ಚಿಕಿತ್ಸೆಗೆ ನೆರವಾಗಿದ್ದಾರೆ. ಈ ವರ್ಷ ಅಷ್ಟಮಿಯಂದು ಎರಡು ದಿನ ಡೀಮನ್ ರಾಕ್ಷಸ ಮಾದರಿಯ ಭಯಾನಕ ವೇಷ ಹಾಕಿ ಮತ್ತೆ 8 ಮಕ್ಕಳಿಗೆ ನೆರವು ವಿತರಿಸಲಾಗಿದೆ ಎಂದು ರವಿ ಕಟಪಾಡಿ ತಿಳಿಸಿದರು.