ಪ್ರಧಾನಿ ಭೇಟಿ ಬಗ್ಗೆ ಜಾಲತಾಣದಲ್ಲಿ ಆಕ್ಷೇಪಾರ್ಹ ಸಂದೇಶ 2 ಪ್ರಕರಣ ದಾಖಲು
ಮಂಗಳೂರು, ಆ.31: ಸೆ.2 ರಂದು ನಗರದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಮಾಹಿತಿಗಳನ್ನು ಹಂಚಿದ ಆರೋಪದ ಮೇಲೆ ಎರಡು ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಇಂದು ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು, ಫೋಟೊವೊಂದರ ಮೇಲೆ ಗುರುತು ಹಾಕಿ ಆಕ್ಷೇಪಾರ್ಹ ಸಂದೇಶ ರವಾನೆ ಮಾಡಲಾಗುತ್ತಿತ್ತು. ಅದಲ್ಲದೆ ಪ್ರಧಾನಿ ಕಾರ್ಯಕ್ರಮದ ಬಗ್ಗೆ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಎರಡು ಪ್ರಕಾರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಬಗ್ಗೆ ಗೊಂದಲ ಸೃಷ್ಟಿಸುವ ಸಲುವಾಗಿಯೇ ಕೆಲವು ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಸೃಷ್ಟಿಸಲಾಗಿದೆ. ಅಂತಹ ಗ್ರೂಪ್‌ಗಳ ಮೇಲೆ ಪೊಲೀಸ್ ಇಲಾಖೆಯು ವಿಶೇಷ ನಿಗಾ ವಹಿಸಿವೆ. ಮಾನಹಾನಿ, ತೇಜೋವಧೆ, ಆಕ್ಷೇಪಾರ್ಹ ಅಂಶಗಳನ್ನು ಉಲ್ಲೇಖಿಸಿ ಸಂದೇಶ ರವಾನಿಸಿದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು, ಅಲ್ಲದೆ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.