ಕೊರಗ ಸಮುದಾಯದವರಿಗೆ ನೀಡುತ್ತಿದ್ದ ಉಚಿತ ಚಿಕಿತ್ಸಾ ವ್ಯವಸ್ಥೆ ಮುಂದುವರಿಸಿ- ಸಿಪಿಎಂ ಒತ್ತಾಯ

ಉಡುಪಿ ಆ.31(ಉಡುಪಿ ಟೈಮ್ಸ್ ವರದಿ): ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದವರಿಗೆ ಸರಕಾರದ ವತಿಯಿಂದ ನೀಡಲಾಗುತ್ತಿದ್ದ ಉಚಿತ ಚಿಕಿತ್ಸಾ ವ್ಯವಸ್ಥೆಯನ್ನು ಹಿಂಪಡೆದಿರುವ ಆದೇಶವನ್ನು ವಾಪಾಸು ಪಡೆಯಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)ದ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಿಕೊಂಡಿರುವ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅವರು, ಇನ್ನು ಮುಂದೆ ಕೊರಗರ ಆರೋಗ್ಯ ಚಿಕಿತ್ಸೆಗೆ ಹಣ ನೀಡುವುದಿಲ್ಲ ಎಂದು ಆದೇಶ ಹೊರಡಿಸಿರುವುದು ಅಮಾನವೀಯವಾಗಿದೆ. ಹಾಗೂ ಸರಕಾರವು ಕುಡಿತ(ಮಧ್ಯಪಾನ) ಮತ್ತಿತರ ದುಶ್ಚಟದಿಂದ  ಅವರ ಆರೋಗ್ಯ ಕೆಡುತ್ತಿದೆ ಎಂದು ಅವೈಜ್ಞಾನಿಕವಾಗಿ ಯಾವುದೇ ರೀತಿಯ ಅಧ್ಯಯನ, ದಾಖಲೆ ಇಲ್ಲದೆ ಉಚಿತ ಆರೋಗ್ಯ ಸೇವೆಯನ್ನು ಹಿಂತೆಗೆದು ಕೊಂಡಿದೆ. ಇದು ಕೊರಗ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೊರಗರ ಆರೋಗ್ಯ ಚಿಕಿತ್ಸೆಗೆ ಹಣ ಬಿಡುಗಡೆ ಮಾಡಲು ಸರಕಾರಕ್ಕೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ ಉಡುಪಿ ಇವರು  ಸರಿಯಾಗಿ ಪ್ರಸ್ತಾವನೆ ಕಳುಹಿಸಿದೆ. ಆದರೆ ಉನ್ನತ ಮಟ್ಟದ ಅಧಿಕಾರಿಗಳು ಅದು ಹೇಗೆ ಅವೈಜ್ಞಾನಿಕ ವಿವರದೊಂದಿಗೆ ತಿರಸ್ಕಾರ ಮಾಡಿದ್ದರು ಎನ್ನುವುದು ತಿಳಿಯುತ್ತಿಲ್ಲ. ನಿಜವಾಗಿಯೂ ಕಳೆದ 15 ವರ್ಷದಿಂದ ಆ ಸಮುದಾಯದ ಜನರಲ್ಲಿ ಹಲವಾರು ಸಂಘಟನೆಗಳ ಪ್ರಯತ್ನದಿಂದ ಹಾಗೂ ಮಕ್ಕಳು ವಿದ್ಯೆ ಕಲಿತು ಕುಟುಂಬದ ಹಿರಿಯರು ದುಶ್ಚಟಗಳಿಂದ ದೂರವಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಉಚಿತ ಚಿಕಿತ್ಸಾ ವ್ಯವಸ್ಥೆಯನ್ನು ಹಿಂತೆಗೆದುಕೊಂಡರೆ ಆ ಸಮುದಾಯಕ್ಕೆ ತೀರಾ ಹಾನಿಯಾಗುತ್ತದೆ. ಆದ್ದರಿಂದ ಆದೇಶವನ್ನು ವಾಪಾಸು ಪಡೆಯಬೇಕೆಂದು ಒತ್ತಾಯಿಸುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕೊರಗರು ಆರ್ಥಿಕವಾಗಿ ಸಾಮಾಜಿಕವಾಗಿ ತೀರಾ ಹಿಂದುಳಿದ ಮತ್ತು ಅಂಚಿಗೆ ತಳಲ್ಪಟ್ಟ ಸಮುದಾಯವಾಗಿದೆ. ಅವರ ಜನಸಂಖ್ಯೆ ತೀರಾ ಕಡಿಮೆ ಇದೆ, ಮಾತ್ರವಲ್ಲ ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದೆ. ಆದ್ದರಿಂದ ಅವರ ರಾಜಕೀಯ ಪ್ರಭಾವವೂ ಇಲ್ಲ. ಇವೆಲ್ಲಾ ಹಿನ್ನೆಲೆಯಲ್ಲಿ ಆ ಸಮುದಾಯದ ಆರೋಗ್ಯ ರಕ್ಷಣೆಗೋಸ್ಕರ ಉಚಿತ ವೈದ್ಯಕೀಯ ವೆಚ್ಚವನ್ನು ಸರಕಾರದ ವತಿಯಿಂದಲೇ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ (ITDP) ಮೂಲಕ ಈ ವರೆಗೂ ಒದಗಿಸಲಾಗುತ್ತಿದೆ. ಆಯುಷ್ಮಾನ್ ಮತ್ತಿತರ ಯೋಜನೆಗಳಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಗುತ್ತಿಲ್ಲ.

ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ 20 ವರ್ಷದ ಒಳಗಿನ ಮಕ್ಕಳು ಎರಡು ಮೂರು ತಿಂಗಳ ಅಂತರದಲ್ಲಿ ಸತ್ತಿದ್ದಾರೆ. ಅವರಿಗೆ ಯಾವುದೇ ದುಶ್ಚಟ ಇಲ್ಲ. ಪೌಷ್ಟಿಕಾಂಶದ ಕೊರತೆಯೇ ಅವರ ಸಾವಿಗೆ ಕಾರಣ. ಕಾರ್ಕಳದಲ್ಲಿ 7 ವರ್ಷದ ಮಗು ಕಿಡ್ನಿ ಸಮಸ್ಯೆಯಿಂದ  ಬಳಲುತ್ತಿದೆ. ಬೈಂದೂರು ಕಾಲೇಜು ಓದುವ ಹುಡುಗಿಯೊಬ್ಬಳ 2 ಕಿಡ್ನಿ ಫೇಲ್ ಆಗಿದೆ. ಬಾರ್ಕೂರಿನಲಿ ಮೊನ್ನೆ ಒಂದು ಹುಡುಗಿ ಸಾವು ಆಗಿದೆ ಎಂಬ ಮಾಹಿತಿ ಇದೆ. ರಕ್ತಹೀನತೆ, ಮಧುಮೇಹ, ಖಾಮಾಲೆ, ಕ್ಯಾನ್ಸರ್, ಹೃದಯ ಸಂಬಂಧೀ ಕಾಯಿಲೆಗಳಂತಹ ಮಾರಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!