ಸೌದಿ: ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದ ಮಹಿಳೆಗೆ 45 ವರ್ಷ ಜೈಲು!

ರಿಯಾದ್: ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾಗಿ ಮಹಿಳೆಯೊಬ್ಬರಿಗೆ ಸೌದಿ ಅರೇಬಿಯಾದ ನ್ಯಾಯಾಲಯವು 45 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ ಬಳಿಕವೂ ಮಹಿಳಾ ಕಾರ್ಯಕರ್ತರೊಬ್ಬರ ವಿರುದ್ಧದ ಸೌದಿಯ ದಮನಕಾರಿ ವರ್ತನೆಗೆ ಉದಾಹರಣೆಯಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರ ಗುಂಪು ಹೇಳಿದೆ.

ಸಾಮಾಜಿಕ ಮಾಧ್ಯಮ ಬಳಕೆ ನಿರ್ಬಂಧದ ಕಟ್ಟುಪಾಡುಗಳನ್ನು ಉಲ್ಲಂಘಿಸಿ ಇಂಟರ್ನೆಟ್ ಅನ್ನು ಬಳಸುತ್ತಿರುವ ಮತ್ತು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ನೌರಾ ಬಿಂಟ್ ಸಯೀದ್ ಅಲ್-ಕಹ್ತಾನಿ ಅವರಿಗೆ ಕಳೆದ ವಾರ ಸೌದಿಯ ವಿಶೇಷ ಕ್ರಿಮಿನಲ್ ನ್ಯಾಯಾಲಯವು ಶಿಕ್ಷೆ ವಿಧಿಸಿದೆ ಎಂದು ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ ಡಾನ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.ಈ

ಕಹ್ತಾನಿ ಅಥವಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ಪ್ರಕರಣದ ಕುರಿತಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಡಾನ್ ಸಂಸ್ಥೆ ಹೇಳಿದೆ.

ಎರಡು ಮಕ್ಕಳ ತಾಯಿ ಮತ್ತು ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ವಿದ್ಯಾರ್ಥಿನಿಯಾಗಿದ್ದ ಸಲ್ಮಾ ಅಲ್-ಶೆಹಾಬ್ ಅವರು ಟ್ವಿಟರ್‌ನಲ್ಲಿ ಭಿನ್ನಮತೀಯರು ಮತ್ತು ಕಾರ್ಯಕರ್ತರಿಗೆ ಬೆಂಬಲವಾಗಿ ರಿಟ್ವೀಟ್ ಮಾಡಿದ್ದಕ್ಕಾಗಿ 35 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಕೆಲವು ವಾರಗಳ ನಂತರ ಕಹ್ತಾನಿ ಅವರ ಅಪರಾಧ ಸಾಬೀತಾಗಿದೆ.

ಜುಲೈನಲ್ಲಿ ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಜೋ ಬೈಡನ್ ಅವರು, ಅಮೆರಿಕ ಮತ್ತು ತಮ್ಮ ಸಾಂಪ್ರದಾಯಿಕ ಮಿತ್ರ ರಾಷ್ಟ್ರ ಸೌದಿ ನಡುವಿನ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಕಾಳಜಿಯನ್ನು ವ್ಯಕ್ತಪಡಿಸಿದ ನಂತರವೂ ಈ ಘಟನೆಗಳು ನಡೆದಿವೆ.

ಟ್ವೀಟ್‌ ಮಾಡಿದ್ದಕ್ಕೆ 34 ವರ್ಷಗಳ ಪ್ರಯಾಣ ನಿಷೇಧವೂ ಸೇರಿದಂತೆ ಶೆಹಾಬ್‌ ಅವರಿಗೆ ವಿಧಿಸಿದ ಶಿಕ್ಷೆಯ ಕುರಿತು ಕಳೆದ ವಾರ ಸೌದಿ ಅರೇಬಿಯಾದೊಂದಿಗೆ ಕಳವಳ ವ್ಯಕ್ತಪಡಿಸಲಾಗಿದೆ ಎಂದು ಅಮೆರಿಕ ಹೇಳಿತ್ತು.

Leave a Reply

Your email address will not be published. Required fields are marked *

error: Content is protected !!