ಉಡುಪಿ ನಗರ ಸಭೆಯಲ್ಲಿ ಬ್ರೋಕರ್ ಗಳ ಹಾವಳಿ: ಆಡಳಿತ-ವಿಪಕ್ಷಗಳ ಆರೋಪ
ಉಡುಪಿ ಆ.30 (ಉಡುಪಿ ಟೈಮ್ಸ್ ವರದಿ): ಇಂದು ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಕಿನ್ನಿಮೂಲ್ಕಿಯ ಸ್ವಾಗತಗೋಪುರದ ಬಳಿಯ ಮಹಿಳಾ ಮೀನುಗಾರರ ತಾತ್ಕಾಲಿಕ ಶೆಡ್ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಚರ್ಚೆಗಳು ನಡೆದು ಆಡಳಿತ ಮತ್ತು ವಿರೋಧ ಪಕ್ಷ ಸದಸ್ಯರ ನಡುವೆ ಭಾರೀ ಗದ್ದಲಕ್ಕೆ ಕಾರಣವಾಯಿತು.
ಈ ವಿಷಯ ಪ್ರಸ್ತಾಪಿಸಿದ ನಾಮನಿರ್ದೇಶಿತ ಸದಸ್ಯ ದೇವದಾಸ್ ಶೆಟ್ಟಿಗಾರ್ ಅವರು ಕಿನ್ನಿಮೂಲ್ಕಿಯಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ ಸ್ಥಳೀಯ ಕಾಂಗ್ರೆಸ್ ಸದಸ್ಯೆ ಅಮೃತಾ ಕೃಷ್ಣಮೂರ್ತಿ ವಿರುದ್ಧ ಕಾನೂನು ಕ್ರಮ ಜರುಗಿಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಅವರು, ಮೀನುಗಾರರ ಮನವಿ ಮೇರೆಗೆ ಶೆಡ್ ನಿರ್ಮಿಸಿಕೊಟ್ಟಿದ್ದೇನೆ. ಇದು ತಾತ್ಕಾಲಿಕ ಶೆಡ್ ಹೊರತು, ಶಾಶ್ವತ ಶೆಡ್ ಅಲ್ಲ. ಅಧಿಕಾರಿಗಳು ನೋಟಿಸ್ ನೀಡದೆ ಏಕಾಏಕಿ ತೆರವು ಮಾಡಿದ್ದಾರೆ ಎಂದು ಹೇಳಿದರು. ಈ ವೇಳೆ ಅವರ ಸ್ಪಷ್ಟನೆಗೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ವಾಗ್ದಾಳಿ ನಡೆಸಿದರು.
ಇದರಿಂದ ಕೆಲಕಾಲ ಗದ್ದಲ ಉಂಟಾಗಿ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೇ ತೀವ್ರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ರಘುಪತಿ ಭಟ್ ಅವರು ಆಡಳಿತ ಪಕ್ಷದವರನ್ನು ಸಮಾಧಾನಪಡಿಸಿದರು. ಬಳಿಕ ಪೌರಾಯುಕ್ತ ಉದಯ ಶೆಟ್ಟಿ ಅವರು ಮಾತನಾಡಿ, ಸರಕಾರಿ ಜಾಗದಲ್ಲಿರುವ ಅಕ್ರಮ ಕಟ್ಟಡ ತೆರವು ಮಾಡುವ ವೇಳೆ ನೋಟಿಸ್ ನೀಡಬೇಕೆಂದಿಲ್ಲ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು ವಿಷಾದನೀಯ. ಈ ಬಗ್ಗೆ ಕಾನೂನು ಪ್ರಕಾರ ಕ್ರಮಕೈಗೊಂಡಿದ್ದೇವೆ ಎಂದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯರಾದ ಗಿರೀಶ್ ಅಂಚನ್, ಪ್ರಭಾಕರ ಪೂಜಾರಿ ಸಹಿತ ವಿವಿಧ ಸದಸ್ಯರು ಅಮೃತಾ ಕೃಷ್ಣಮೂರ್ತಿ ವಿರುದ್ಧ ಖಂಡನಾ ನಿರ್ಣಯ ಕೈಗೊಂಡು, ಅವರ ಸದಸ್ಯತ್ವ ಅನರ್ಹಗೊಳಿಸಬೇಕು. ಇಲ್ಲದಿದ್ದರೆ ಸಭೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದರು. ಆಗ ಮಧ್ಯಪ್ರವೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಅವರು, ಕಾರ್ಯಾಚರಣೆ ತೆರವು ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ವಿಷಾದನೀಯ ಎಂದು ಅಮೃತಾ ಕೃಷ್ಣಮೂರ್ತಿ ಪರ ಹೇಳಿಕೆ ನೀಡಿದರು. ಹಲವು ಕಾಲ ಗದ್ದಲದ ಬಳಿಕ ಸಭೆ ತಣ್ಣಗಾಗಿದ್ದು, ಬಳಿಕ ಇತರ ವಿಷಗಳ ಬಗ್ಗೆ ಚರ್ಚೆಗಳು ನಡೆದವು.
ಇದೇ ವೇಳೆ ಸಭೆಯಲ್ಲಿ, ನಗರ ಸಭೆಯಲ್ಲಿ ಬ್ರೋಕರ್ ಗಳ ಹಾವಳಿ ಹೆಚ್ಚಾಗಿಗೆ ಎಂದು ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರು ಗಂಭೀರ ಆರೋಪ ಮಾಡಿದರು. ಕಚೇರಿ ಸಮಯ ಮುಗಿದಿದ್ದರೂ ಬ್ರೋಕರ್ ಗಳು ನಗರ ಸಭೆಯ ಒಳಗೇ ಇರುತ್ತಾರೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಬ್ರೋಕರ್ ಗಳೇ ಬಂದು ಕಡತಗಳಲ್ಲಿ ಅವರದ್ದೇ ಮೊಬೈಲ್ ಸಂಖ್ಯೆಗಳನ್ನು ನೀಡುತ್ತಾರೆ. ಸಮಸ್ಯೆ ಇರುವವರಿಗೆ ಕರೆ ಮಾಡಿದರೆ ಅವರು ಸಂಪರ್ಕಕ್ಕೆ ಸಿಗುವುದಿಲ್ಲ. ಇಲ್ಲಿ ಬ್ರೋಕರ್ ಗಳೇ ಕಾರುಬಾರು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ನಿನ್ನೆ ನಗರ ಸಭೆಗೆ ಬಂದ ಬ್ರೋಕರ್ ಒಬ್ಬರು ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿದ ಬಗ್ಗೆಯೂ ವಿಷಯ ಪ್ರಸ್ತಾಪಿಸಿದರು.ಈ ಬಗ್ಗೆ ಸದಸ್ಯ ರಮೇಶ್ ಕಾಂಚನ್ ಅವರು ಪ್ರತಿಕ್ರಿಯೆ ನೀಡಿ, ಬ್ರೋಕರ್ ಗಳು ದುರಾಂಕರವಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ನಾನು ಒಪ್ಪುತ್ತೇನೆ ಆದರೆ, ನಮ್ಮ ಇಲಾಖೆಗಳಲ್ಲಿ ವಿಶೇಷವಾಗಿ ಕಂದಾಯ ಇಲಾಖೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಯವರು ಜನರು ಸಮಸ್ಯೆಯನ್ನು ಕೇಳಿಕೊಂಡು ಬಂದಾಗ ಶೀಘ್ರವಾಗಿ ಸಮಸ್ಯೆ ಪರಿಹಾರ ಮಾಡಿದರೆ ಬ್ರೋಕರ್ ಗಳು ಯಾಕೆ ಬರುತ್ತಾರೆ ಎಂದು ಪ್ರಶ್ನಿಸಿದರು. ಹಾಗೂ ಅವರು ಬ್ರೋಕರ್ ಗಳನ್ನು ಕೂರಿಸಿಕೊಂಡೇ ಕೆಲಸ ಮಾಡಿಸುತ್ತಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ರಘುಪತಿ ಭಟ್ ಅವರು, ಇನ್ನು ಮುಂದೆ ಬ್ರೋಕರ್ ಗಳ ಮೂಲಕ ಫೈಲ್ ಮೂವ್ ಮಾಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಳಂಬ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸದೇ ಇರುವ ಅಧಿಕಾರಿಗಳ ವಿರುದ್ಧ ಟಿಪ್ಪಣಿ ಮಾಡಿ ಆಯುಕ್ತರಿಗೆ ವರದಿ ಸಲ್ಲಿಸಿ ಹಾಗೂ ಇಂತಹ ಅಧಿಕಾರಿಗಳನ್ನು ಆಯುಕ್ತರು ಅಮಾನತು ಮಾಡಿ ಆಗ ಅವರಿಗೆ ಬುದ್ದಿ ಬರುತ್ತದೆ ಎಂದು ಹೇಳಿದರು. ಹಾಗೂ ನಗರ ಸಭೆಯ ಅಧಿಕಾರಿಗಳ ಜೊತೆ ದುರ್ವರ್ತನೆ ತೋರಿದ ಬ್ರೋಕರ್ ವಿರುದ್ಧ ಪೊಲೀಸ್ ದೂರು ನೀಡಿ ನಿರ್ದಾಕ್ಷಿಣ್ಯವಾಗಿ ಕ್ರಮ ಗೊಳ್ಳುವಂತೆ ಸೂಚನೆ ನೀಡಿದರು. ನಗರ ಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.