ಮಲ್ಪೆ: ಮಕ್ಕಳಿಗೆ ಕುರಾನ್ ಕಲಿಸುವುದು ಬೇಡ ಹೇಳಿದಕ್ಕೆ ಹಲ್ಲೆಗೈದು ಜೀವ ಬೆದರಿಕೆ
ಮಲ್ಪೆ ಆ.30 (ಉಡುಪಿ ಟೈಮ್ಸ್ ವರದಿ): ಮಸೀದಿಯಲ್ಲಿ ಮಕ್ಕಳಿಗೆ ಕುರಾನ್ ಕಲಿಸುವುದು ಬೇಡ ಎಂದು ಹೇಳಿದಕ್ಕಾಗಿ ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಹೂಡೆಯ ಮುಆವಿಯಾ ಮಸೀದಿಯ ಅಧ್ಯಕ್ಷ ಕುದುರ್ ಸೈಪುಲ್ಲಾ ಅವರು ಪೈಜಲ್ ಸುಲೇಮಾನ್ ಎಂಬತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಹೂಡೆಯ ನಿವಾಸಿಯಾದ ಪೈಜಲ್ ಸುಲೇಮಾನ್ ಎಂಬಾತನು ಮಸೀದಿಯ ಅಧ್ಯಕ್ಷರಾದ ಕುದುರ್ ಸೈಪುಲ್ಲಾ ಅವರ ಅನುಮತಿ ಇಲ್ಲದೆ ಮುಆಮಿಯಾ ಮಸೀದಿಯ ಬಳಿಯ ಖಾಸಗಿ ಜಾಗದಲ್ಲಿ ಶೆಡ್ ಕಟ್ಟಿಕೊಂಡು 10-15 ವರ್ಷದ ಕೆಳಗಿನ ಸಣ್ಣ ಮಕ್ಕಳಿಗೆ ಕುರಾನ್ ಬೋಧನೆ ಮಾಡುತಿದ್ದನು. ಈ ಬಗ್ಗೆ ಆತನಲ್ಲಿ ಮಸೀದಿಯಲ್ಲಿ ಕುರಾನ್ ಕಲಿಸುವುದು ಬೇಡವೆಂದು ಹೇಳಿದ್ದರು. ಈ ವಿಚಾರವಾಗಿ ಪೈಜಲ್ ಸುಲೇಮಾನ್ ಹಾಗೂ ಕುದುರ್ ಸೈಪುಲ್ಲಾ ಅವರ ನಡುವೆ ಮಾತುಕತೆ ಕೂಡಾ ನಡೆದಿತ್ತು. ಇಂದು ಬೆಳಿಗ್ಗೆ ಮಸೀದಿಗೆ ಪ್ರಾರ್ಥನೆಗಾಗಿ ಹೋದ ಕುದುರ್ ಸೈಪುಲ್ಲಾ ಅವರೊಂದಿಗೆ ಪೈಜಲ್ ಸುಲೇಮಾನ್ ಮತ್ತು ಆತನ ಅಣ್ಣ ಸೇರಿ ಕುದುರ್ ಸೈಪುಲ್ಲಾ ಬಳಿಬಂದು ವಾಗ್ವಾದಕ್ಕಿಳಿದಿದ್ದರು. ಮಾತ್ರವಲ್ಲದೆ ಕುದುರ್ ಸೈಪುಲ್ಲಾ ಅವರು ಮಸೀದಿಯಿಂದ ಹೊರಗೆ ಬಂದಾಗ ಮಸೀದಿಯ ಗೇಟ್ ನ ಬಳಿ ಆರೋಪಿತರಾದ ಪೈಜಲ್ ಸುಲೇಮಾನ್ ಹಾಗೂ ಫಾರೂಕ್ ಸುಲೇಮಾನ್ ಇಬ್ಬರು ಸೇರಿ ಅವರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.