ಪಾಕಿಸ್ತಾನ ಭೀಕರ ಮಳೆ: ನೆರೆ ಸಂತ್ರಸ್ತ ಕುಟುಂಬಗಳಿಗೆ ಪ್ರಧಾನಿ ಮೋದಿ ಸಾಂತ್ವನ
ಹೊಸದಿಲ್ಲಿ ಆ.30: ಪಾಕಿಸ್ತಾನದಲ್ಲಿ ಭೀಕರ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದ ಸಂತ್ರಸ್ತ ಕುಟುಂಬಗಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಸಂತ್ರಸ್ತ ಕುಟುಂಬ ಗಳಿಗೆ ಸಾಂತ್ವನ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಪಾಕಿಸ್ತಾನ ಭೀಕರ ಪ್ರವಾಹಕ್ಕೆ ತುತ್ತಾಗಿರುವುದು ಅತೀವ ಬೇಸರ ತಂದಿದೆ. ಈ ಪ್ರಾಕೃತಿಕ ವಿಕೋಪದಿಂದ ಜೀವ ಕಳೆದುಕೊಂಡವರ ಕುಟುಂಬಗಳ ಸದಸ್ಯರಿಗೆ, ಗಾಯಗೊಂಡವರಿಗೆ ಮತ್ತು ಬಾಧಿತರಾದ ಎಲ್ಲರಿಗೂ ನಾವು ಹೃದಯಪೂರ್ವಕ ಸಾಂತ್ವನ ಹೇಳುತ್ತಿದ್ದೇವೆ ಮತ್ತು ಶೀಘ್ರವೇ ಸಹಜ ಪರಿಸ್ಥಿತಿ ನಿರ್ಮಾಣವಾಗಲಿ ಎಂದು ಆಶಿಸುತ್ತೇವೆ” ಎಂದು ಹೇಳಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರಧಾನಿ ಮೋದಿಯವರ ಸಂದೇಶದ ಬೆನ್ನಲ್ಲೇ, ಪ್ರವಾಹದಿಂದಾದ ಹಾನಿಯನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನ ಭಾರತದ ಜತೆಗಿನ ವ್ಯಾಪಾರ ಸಂಬಂಧವನ್ನು ಪುನರಾರಂಭಿಸಲಿದೆ ಎನ್ನಲಾಗಿದೆ. ಹಾಗೂ ಪಾಕಿಸ್ತಾನ ರವಿವಾರ ಘೋಷಿಸಿದ ಪ್ರಕಾರ, ಪ್ರವಾಹದಿಂದ ಕನಿಷ್ಠ ಒಂದು ಸಾವಿರ ಮಂದಿ ಮೃತಪಟ್ಟಿದ್ದು, ಕನಿಷ್ಠ ಒಂದು ಸಾವಿರ ಕೋಟಿ ಡಾಲರ್ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಭಾರತದಿಂದ ಈರುಳ್ಳಿ ಹಾಗೂ ಟೊಮ್ಯಾಟೊದಂಥ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಸರ್ಕಾರ ಪರಿಶೀಲಿಸಲಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫತ್ ಇಸ್ಮಾಯಿಲ್ ಹೇಳಿದ್ದಾರೆ.