ಕೊರಗ ಸಮುದಾಯದ ವೈದ್ಯಕೀಯ ವೆಚ್ಚ ಪಾವತಿ ರದ್ದು, ಮರು ಪರಿಶೀಲಿಸಿ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಆಗ್ರಹ

ಉಡುಪಿ, ಆ.29 (ಉಡುಪಿ ಟೈಮ್ಸ್ ವರದಿ): ಕರಾವಳಿಯ ಉಭಯ ಜಿಲ್ಲೆಯ ಕೊರಗ ಸಮುದಾಯದ ವೈದ್ಯಕೀಯ ವೆಚ್ಚ ಪಾವತಿಯನ್ನು ರದ್ದುಪಡಿಸಿರುವ ಸರಕಾರದ ಆದೇಶವನ್ನು ಮರು ಪರಿಶೀಲಿಸಿ ಮತ್ತೆ ವೈದ್ಯಕೀಯ ವೆಚ್ಚಗಳನ್ನು ಭರಿಸಬೇಕು ಎಂದು ಕರ್ನಾಟಕ ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಆಗ್ರಹಿಸಿದೆ.

ಈ ಬಗ್ಗೆ ಇಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಕರ್ನಾಟಕ ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಸುಶೀಲಾ ನಾಡ ಅವರು, ಸರಕಾರ ಇತರ ಅಧ್ಯಯನಗಳ ಜೊತೆಗೆ ಕೊರಗ ಸಮುದಾಯದ ಬಗ್ಗೆಯೂ ಅಧ್ಯನ ಮಾಡುವುದನ್ನು ಪರಿಗಣಣೆಗೆ ತೆಗೆದುಕೊಳ್ಳಬೇಕು ಎಂದು ಕೇಳಿಕೊಳ್ಳುತ್ತಾ ಬಂದರೂ ಈವರೆಗೂ ಅದು ಆಗಿಲ್ಲ. ಇದರ ಜೊತೆಗೆ ಆರೋಗ್ಯ ನಿಧಿಯಲ್ಲಿ ಇನ್ನು ಮುಂದೆ ವೆಚ್ಚಗಳನ್ನು ಭರಿಸುವುದಿಲ್ಲ ಎಂದು ಸರಕಾರ ಹೇಳಿದೆ. ಸಮುದಾಯದ ಆರೋಗ್ಯ ಹದಗೆಡುತ್ತಿರುವುದು ಮತ್ತು ಮರಣ ಹೊಂದುವುದು ಕೇವಲ ದುಷ್ಚಟ ಮತ್ತು ಮದ್ಯಪಾನದಿಂದ ಎಂಬ ಜಿಲ್ಲಾಡಳಿತದ ವರದಿ ನಂಬಲು ಅಸಾಧ್ಯವಾದುದು.

ಜಿಲ್ಲೆಯ ಕೊರಗ ಸಮುದಾಯದ ಜನರು ರಕ್ತ ಹೀನತೆ, ಅಪೌಷ್ಟಿಕತೆ ಹಾಗೂ ಇತರ ಕಾರಣಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂಬುದು ವಾಸ್ತವ. ಆದ್ದರಿಂದ ಕರ್ನಾಟಕ ಸರಕಾರದ ರಾಜ್ಯಪಾಲರ ಆದೇಶ ಅನುಸಾರ ವೈದ್ಯಕೀಯ ವೆಚ್ಚ ಮರುಪಾವತಿಯನ್ನು ರದ್ದು ಮಾಡಿರುವ ಆದೇಶವನ್ನು ಮರು ಪರಿಶೀಲಿಸಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವೈದ್ಯಕೀಯ ವೆಚ್ಚ ಪಾವತಿಸುವಂತೆ ಆದೇಶ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಹಾಗೂ ಜಿಲ್ಲೆಯಲ್ಲಿ ನಶಿಸುತ್ತಿರುವ ಕೊರಗ ಸಮುದಾಯದ ಬಗ್ಗೆ ಅಧ್ಯಯನ ಮಾಡಲು ಹಲವು ವರ್ಷಗಳಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಹಲವು ಅಧ್ಯಯನದ ಬಳಿಕವೂ ಕೊರಗ ಸಮುದಾಯ ನಶಿಸಲು ನಿಖರ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಆಗಿಲ್ಲ. ಕೊರಗ ಸಮುದಾಯದ ಜನಸಂಖ್ಯೆಯ ವರದಿಯನ್ನು ನೋಡುವಾಗ ಇಳಿಮುಖವಾಗಿರುವುದು ಕಂಡು ಬರುತ್ತದೆ. 2011 ರಲ್ಲಿ ಉಡುಪಿ ಜಿಲ್ಲೆಯಲ್ಲಿ 15,000 ದಷ್ಟಿದ್ದ ಕೊರಗ ಸಮುದಾಯದ ಜನಸಂಖ್ಯೆ ಈಗ 11,000 ಕ್ಕೆ ಇಳಿಕೆಯಾಗಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ ಈ ಬಗ್ಗೆ ಇನ್ನೂ ಸ್ಪಷ್ಟವಾದ ಜನಗಣತಿ ಆಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ  ಬೊಗ್ರ ಕೊರಗ, ಸುನಂದ, ದಿವಾಕರ್ ಅವರು ಉಪಸ್ಥಿತರಿದ್ದರು.  

Leave a Reply

Your email address will not be published. Required fields are marked *

error: Content is protected !!