ಸಂಸ್ಥೆ ಯಶಸ್ವಿಯಾಗ ಬೇಕಾದರೆ ಶಿಸ್ತು, ಶಿಕ್ಷಣ, ಬಾಂಧವ್ಯ ಇರಬೇಕು- ಸುಬ್ರಹ್ಮಣ್ಯ ಪಡಿತ್ತಾಯ

ಉಡುಪಿ , ಆ.29 (ಉಡುಪಿ ಟೈಮ್ಸ್ ವರದಿ): ಉದ್ಯಾವರದ ಸಂಪಿಗೆ ನಗರದ ಕಾರ್ತಿಕ್ ಕಾಂಪ್ಲೆಕ್ಸ್ ನಲ್ಲಿ ಇಂದು ‘ಸಂಗಮ ಸೇವಾ ಸಹಕಾರ ಸಂಘ‘ದ ಕಚೇರಿ ಇಂದು ಉದ್ಘಾಟನೆಗೊಂಡಿತು. ನೂತನ ಕಚೇರಿಯನ್ನು ಉಡುಪಿ ಶಾಸಕ ರಘುಪತಿ ಭಟ್ ಅವರು ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಈ ವೇಳೆ ಕುತ್ಪಾಡಿಯ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಸುಬ್ರಹ್ಮಣ್ಯ ಪಡಿತ್ತಾಯ ಅವರು ದೀಪ ಬೆಳಗಿಸಿ, ಒಂದು ಸಂಸ್ಥೆ ಯಶಸ್ವಿಯಾಗಿ ನಡೆಯಬೇಕಾದರೆ ಶಿಸ್ತು, ಶಿಕ್ಷಣ, ಉತ್ತಮ ಬಾಂಧವ್ಯ ಇರಬೇಕು. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಠೇವಣಿ ಪತ್ರವನ್ನು ಹಸ್ತಾಂತರ ಮಾಡಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಏರುಪೇರು ಆಗುತ್ತಿದೆ. ಆರ್ಥಿಕ ನಷ್ಟವನ್ನು ಸರಿದೂಗಿಸಲು ಬ್ಯಾಂಕ್ ಗಳ ವಿಲೀನ ಆಗುತ್ತದೆ. ಇಂದು ನೆರೆಯ ರಾಷ್ಟ್ರವಾದ ಶ್ರೀಲಂಕ ಮತ್ತು ಪಾಕಿಸ್ಥಾನದಲ್ಲಿ ಆರ್ಥಿಕ ಪರಿಷ್ಥಿತಿ ಕೆಳಮಟ್ಟಕ್ಕೆ ತಲುಪಲು ಅಲ್ಲಿನ ಬ್ಯಾಂಕಿಂಗ್ ಕ್ಷೇತ್ರದ ಅಸಮರ್ಪಕ ವ್ಯವಸ್ಥೆಯೇ ಕಾರಣ. ಆದರೆ ನಮ್ಮ ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗ್ರಾಹಕರ ಹಣಕ್ಕೆ ಭದ್ರತೆ ಇದೆ. ಸಹಕಾರಿ ಕ್ಷೇತ್ರದಲ್ಲಿ ನಮ್ಮ ದೇಶದಲ್ಲಿ ಅನೇಕ ಮಂದಿ ಸಾಕಷ್ಟು ಮುಂಚೂಣಿಯಲ್ಲಿದ್ದಾರೆ.

ಉತ್ತಮ ಉದ್ದೇಶ ಹೊಂದಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸಲಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು  ಮಾತನಾಡಿದ, ಒಂದು ಸಹಕಾರಿ ಸಂಸ್ಥೆ ಎಂದರೆ ಎಲ್ಲರ ಸಹಕಾರದಿಂದ ನಡೆಯುವಂತಹ ವ್ಯವಸ್ಥೆ. ಉಡುಪಿ ಜಿಲ್ಲೆ ರಾಷ್ಟ್ರೀಕೃತ ಬ್ಯಾಂಕ್ ಗಳ ಸ್ಥಾಪನೆಗೆ ಸಾಕಷ್ಟು ಒತ್ತುಕೊಟ್ಟ ಜಿಲ್ಲೆ.  ಅನೇಕ ರಾಷ್ಟ್ರೀಕೃತ ಬ್ಯಾಂಕ್ ಗಳು ನಮ್ಮಲ್ಲಿ ಹುಟ್ಟಿಕೊಂಡಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಆಸಕ್ತಿಗೆ ಒತ್ತುಕೊಟ್ಟು ಅನೇಕ ಕಡೆಗಳಲ್ಲಿ ಸಹಕಾರಿ ಸಂಸ್ಥೆಗಳು ಹುಟ್ಟಿಕೊಳ್ಳುವುದನ್ನು ಕಾಣಬಹುದು. ಇದು ಆರ್ಥಿಕ ವ್ಯವಸ್ಥೆಗೆ ಇರುವ ಪ್ರೋತ್ಸಾಹಕ್ಕೆ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಲಾಕರ್ ಉದ್ಘಾಟಿಸಿದರು. ಹಾಗೂ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮೀನು ಮಾರಾಟ ಫೆಡರೇಶನ್ ನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅವರು ಷೇರು ಸರ್ಟಿಫಿಕೇಟ್ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಲ್ಪೆ ಉದ್ಯಮಿ ಹರಿಯಪ್ಪ ಕೋಟ್ಯಾನ್, ಮಲ್ಪೆ ಮತ್ಸ್ಯೋದ್ಯಮಿ ಸಾಧು ಸಾಲಿಯನ್,  ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್, ಉಡುಪಿ ಉದ್ಯಮಿ ಸಾಧಿಕ್ ಅಹ್ಮದ್, ಸಮಾಜ ಸೇವಕ ರೋಯ್ಸ್ ಫೆನಾರ್ಂಡಿಸ್, ಮಲ್ಪೆ ಪರ್ಸಿನ್ ಬೋಟ್ ಮಾಲಕರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ ಅವರು ಭಾಗವಹಿಸಿದ್ದರು.

ಈಸಂದರ್ಭದಲ್ಲಿ ಸಂಗಮ ಸೇವಾ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್ ಸಂಪಿಗೆ ನಗರ, ಉಪಾಧ್ಯಕ್ಷ ರಮೇಶ್ ಆಚಾರ್ಯ ಕುತ್ಪಾಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ಗಣೇಶ್, ನಿರ್ದೇಶಕರಾದ ಸುರೇಶ್ ಪೂಜರಿ ಕುತ್ಪಾಡಿ, ಅಶೋಕ್ ಭಂಡಾರಿ ಕುತ್ಪಾಡಿ, ರವಿರಾಜ್ ಸಾಲ್ಮರ, ರವಿ ಕುಮಾರ್ ಉದ್ಯಾವರ, ಪ್ರತಾಪ್ ಕುಮಾರ್ ಉದ್ಯಾವರ, ಗಿರಿರಾಜ್ ಸಂಪಿಗೆ ನಗರ, ಪ್ರಶಾಂತ್ ಸಾಲ್ಯಾನ್ ಕುತ್ಪಾಡಿ, ಅಂಜನಾ ಅಮೀನ್, ಉಷಾ ಉದ್ಯಾವರ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!