ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ- ಆ.30 ‘ಮೊಬೈಲ್ ಐ ಕ್ಲಿನಿಕ್’ ಆರಂಭ
ಮಂಗಳೂರು, ಆ.29: ಕರಾವಳಿಯ ಪ್ರಸಿದ್ಧ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ವತಿಯಿಂದ ಸರ್ವರಿಗೂ ದೃಷ್ಟಿ ಎಂಬ ನೂತನ ಸೇವೆಯನ್ನು ನೀಡಲಾಗುತ್ತಿದೆ.
ಈ ನೂತನ ಸೇವೆಯ ನೇತ್ರ ಸಂಚಾರಿ ಕ್ಲಿನಿಕ್ (ಮೊಬೈಲ್ ಐ ಕ್ಲಿನಿಕ್) ನ್ನು ಆ.30 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನ ಪ್ರಸಾದ್ ನೇತ್ರಾಲಯದಲ್ಲಿ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸೆಂಚುರಿ ಗ್ರೂಪ್‍ನ ಡಾ| ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೆಬಲ್ ಟ್ರಸ್ಟ್ ನಿಂದ ಪ್ರಾಯೋಜಿತವಾದ ಈ ವಾಹನವನ್ನು ಸೆಂಚುರಿ ಗ್ರೂಪ್ ನ ಅಧ್ಯಕ್ಷ ಡಾ| ಪಿ.ದಯಾನಂದ ಪೈಯವರು ಹಸ್ತಾಂತರಿಸಲಿದ್ದಾರೆ. ಈ ವಾಹನಕ್ಕೆ ಜರ್ಮನಿ ಮೂಲದ ಕಾರ್ಲ್ ಜೈಸ್ ಇಂಡಿಯಾ (ಬೆಂಗಳೂರು) ತಂಡ ನೇತ್ರ ಪರೀಕ್ಷೆ ಉಪಕರಣಗಳನ್ನು ನೀಡಿದೆ.
ಈ ವಾಹನದ ಮೂಲಕ ನೇತ್ರ ಪರೀಕ್ಷಣೆ ಸೌಲಭ್ಯವನ್ನು ವಾಹನದಲ್ಲಿ ಅಳವಡಿಸಿಕೊಂಡು, ನುರಿತ ವೈದ್ಯರು ಹಾಗೂ ತಂತ್ರಜ್ಞ ಸಹಾಯಕರಿಂದ, ಹಳ್ಳಿ-ಹಳ್ಳಿಗಳಿಗೂ ಜನರ ಬಳಿಗೆ ಹೋಗಿ ಅವರ ನೇತ್ರ ಪರೀಕ್ಷೆ ಮಾಡುವುದೇ ಈ ಸೇವೆಯ ಉದ್ದೇಶವಾಗಿದೆ.
ಕರಾವಳಿಯಲ್ಲಿ ನೇತ್ರ ಚಿಕಿತ್ಸೆ ಕೇಂದ್ರಗಳ ಅತೀ ದೊಡ್ಡ ನೆಟ್ ವರ್ಕ್ ಹೊಂದಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯು ತನ್ನ ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್ ಮುಖಾಂತರ ನಿರಂತರವಾಗಿ ನೇತ್ರ ಚಿಕಿತ್ಸೆಗೆ ಸಂಬಂಧಿಸಿದ ಸಮುದಾಯ ಉಚಿತ ಸೇವೆಗಳನ್ನು ಕಳೆದ 12 ವರ್ಷಗಳಿಂದ ನಡೆಸುತ್ತಾ ಬಂದಿದೆ.
ರಾಜ್ಯದ 7 ಜಿಲ್ಲೆಗಳನ್ನೊಳಗೊಂಡಂತೆ 4 ರಾಜ್ಯಗಳಲ್ಲಿ ಶಿಬಿರಗಳನ್ನು ನಡೆಸುತ್ತಾ ನೇತ್ರ ಉಚಿತ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ, ಕನ್ನಡಕ ಉಚಿತ ವಿತರಣೆ ಮುಖಾಂತರ ಜನರ ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಕೊಡುಗೆಯನ್ನು ಸಲ್ಲಿಸುತ್ತಾ ಬಂದಿದೆ.