ಕಾರ್ಕಳ: ಸೂಪರ್ ವೈಸರ್ ಕಿರುಕುಳ- ಕಾಲೇಜಿನಲ್ಲಿಯೇ ವಿಷ ಸೇವಿಸಿದ ಮಹಿಳಾ ಸಿಬ್ಬಂದಿ

ಕಾರ್ಕಳ ಆ.27(ಉಡುಪಿ ಟೈಮ್ಸ್ ವರದಿ): ದಲಿತ ಜಾತಿಗೆ ಸೇರಿದವರು ಎಂಬ ಕಾರಣಕ್ಕಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದಕ್ಕಾಗಿ ಕಾಲೇಜಿನ ಮಹಿಳಾ ಭದ್ರತಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೆಲಸಕ್ಕೆ ರಾಜೀನಾಮೆ ನೀಡು ಎಂದು ಬೈದು ಅವಮಾನ ಮಾಡಿದ್ದಾರೆ ಎಂಬುದಾಗಿ ಕಾಲೇಜಿನ ಸೆಕ್ಯುರಿಟಿ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿರುವ ಹಿರಿಯಣ್ಣ ಎಂಬವರ ವಿರುದ್ಧ ಮಹಿಳಾ ಭದ್ರತಾ ಸಿಬ್ಬಂದಿ ಸುನಿತಾ ಎಂಬವರು ದೂರು ನೀಡಿದ್ದಾರೆ.

ಸುನೀತಾ ಅವರು ನಿಟ್ಟೆ ಕಾಲೇಜಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. ಕಾಲೇಜಿನ ಸೆಕ್ಯುರಿಟಿ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿರುವ ಹಿರಿಯಣ್ಣ ಎಂಬವರು ಸುನಿತಾ ಅವರು ದಲಿತ ಜಾತಿಗೆ ಸೇರಿದವರು ಎಂಬ ಕಾರಣಕ್ಕಾಗಿ ಸಣ್ಣಪುಟ್ಟ ವಿಚಾರಕ್ಕೂ ಅವರಿಗೆ ಬೈದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು ಈ ಬಗ್ಗೆ ಸುನೀತಾ ರವರು ಎರಡು ಬಾರಿ ಕಾಲೇಜಿನ ಮೇಲಾಧಿಕಾರಿಯವರಿಗೆ ದೂರು ನೀಡಿದ್ದರು. ಆ ಬಳಿಕ ಕೂಡಾ ಹಿರಿಯಣ್ಣರವರು ಸಣ್ಣಪುಟ್ಟ ವಿಷಯಗಳಿಗೆ ಕಿರುಕುಳ ನೀಡುತ್ತಿದ್ದು, ಆ.26 ರಂದು ಸುನೀತಾರವರು ಕಾಲೇಜಿಗೆ ಬಂದ ವೇಳೆ ಹಿರಿಯಣ್ಣರವರು ಸುನೀತಾ ಅವರಿಗೆ ಅವಾಚ್ಯವಾಗಿ ಬೈದು ನನ್ನ ಬಗ್ಗೆ ದೂರು ನೀಡಿದೆ ಎಂದು ಗಲಾಟೆ ಮಾಡಿ “ನೀನು ಮನೆಗೆ ನಡೆ, ನಿನ್ನನ್ನು ಕೆಲಸದಿಂದ ಹೇಗೆ ತೆಗೆಯಬೇಕೆಂದು ನನಗೆ ತಿಳಿದಿದೆ, ನೀನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಗು ಎಂಬುದಾಗಿ ಬೈದು ಅವಮಾನ ಮಾಡಿದ್ದಾರೆ.

ಇದರಿಂದ ನೊಂದು  ಸುನೀತಾರವರು ಕಾಲೇಜಿನಲ್ಲಿ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!