ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳ ಬಿಡುಗಡೆ- ತೃತೀಯ ಲಿಂಗಿಗಳ ಪ್ರತಿಭಟನೆ
ಚಿಕ್ಕಮಗಳೂರು, ಆ.27: ಗುಜರಾತ್ ಸರಕಾರವು ಸನ್ನಡತೆ ಆಧಾರದ ಮೇಲೆ ಬಿಲ್ಕಿಸ್ ಬಾನು ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಿಡುಗಡೆ ಮಾಡಿರುವ ಘಟನೆಯನ್ನು ಖಂಡಿಸಿ ತೃತೀಯ ಲಿಂಗಿಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಇಂದು ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ಸಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, 2002ರ ಮಾ.3ರಂದು ಗುಜರಾತಿನಲ್ಲಿ ಮುಸ್ಲಿಮರ ಮೇಲೆ ಉದ್ದೇಶಪೂರ್ವಕ ಹಿಂಸಾತ್ಮಕ ದಾಳಿ ನಡೆದಿದ್ದು, ಈ ವೇಳೆ 25 ಮಂದಿ ಕೋಮುವಾದಿಗಳ ಗುಂಪೆÇಂದು ಬಿಲ್ಕಿಸ್ ಬಾನು ಅವರ ಕುಟುಂಬದ ಮೇಲೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಬಿಲ್ಕಿಸ್ ಬಾನು ಅವರ 3 ವರ್ಷದ ಮಗಳೂ ಸೇರಿದಂತೆ ಆಕೆಯ 14 ಕುಟುಂಬಸ್ಥರನ್ನು ಹತ್ಯೆ ಮಾಡಿತ್ತು. ಈ ವೇಳೆ ಗರ್ಭೀಣಿಯಾಗಿದ್ದ ಬಿಲ್ಕಿಸ್ ಭಾನು ಅವರ ಮೇಲೆ 11ಮಂದಿ ಕಾಮುಕರು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆಕೆ ನಿತ್ರಾಣಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡ ಕಾಮುಕರು ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಬಳಿಕ ಈ ಘಟನೆ ಸಂಬಂಧ ತನಿಖೆ ನಡೆದು, ಈ ಪ್ರಕರಣದಲ್ಲಿ ಗುಜರಾತ್ ನ್ಯಾಯಾಲಯದ 11 ಮಂದಿ ಆರೋಪಿಗಳನ್ನು ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ಘೋಷಿಸಿ ಶಿಕ್ಷೆ ವಿಧಿಸಿತ್ತು. 2007ರಲ್ಲಿ ಮುಂಬೈನ ಕ್ರಿಮಿನಲ್ ನ್ಯಾಯಾಲಯವೂ ಈ ತೀರ್ಪನ್ನು ಎತ್ತಿಹಿಡಿದಿದ್ದು, ಎಲ್ಲ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆದರೆ ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ಗುಜರಾತ್ ಸರಕಾರ ಸನ್ನಡತೆ ಆಧಾರದ ಮೇಲೆ ಬಿಲ್ಕಿಸ್ ಭಾನು ಪ್ರಕರಣದ ಎಲ್ಲ 11 ಆರೋಪಿಗಳನ್ನು ಬಿಡುಗಡೆ ಮಾಡುವ ಮೂಲಕ ಗುಜರಾತ್ ನ ಬಿಜೆಪಿ ಸರಕಾರ ಇಡೀ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿದೆ. ಅಲ್ಲದೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ಥೆಗೆ ನ್ಯಾಯಾಲಯ ನೀಡಿದ್ದ ನ್ಯಾಯವನ್ನೂ ಕಿತ್ತುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗೂ ಬಿಡುಗಡೆಯಾದ 11 ಆರೋಪಿಗಳಿಗೆ ಹಿಂದೂಪರ ಸಂಘಟನೆಗಳ ಮುಖಂಡರು ಹಾರ ಹಾಕಿ ಸ್ವಾಗತಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ಆರೋಪಿಗಳು ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಸಂತ್ರಸ್ಥೆ ಮುಸ್ಲಿಮ್ ಎಂಬ ತಾರತಮ್ಯ ಮಾಡುವ ಮೂಲಕ ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಲ್ಲಿ ಅಪನಂಬಿಕೆ ಬರುವಂತೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರು, ಗುಜರಾತ್ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನೂ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಾಗೂ ಬಿಲ್ಕಿಸ್ ಜೊತೆಗಿದೆ ಕರ್ನಾಟಕ, ಬಿಲ್ಕಿಸ್ ಗೆ ನ್ಯಾಯ ನೀಡಿ ಎಂಬಂತಹ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಧರಣಿಯಲ್ಲಿ ಮಂಗಳಮುಖಿಯರಾದ ಸ್ವಾತಿಮಲ್ನಾಡ್, ಸ್ಪೂರ್ತಿ, ಸ್ವಾತಿಮಾ ಸೇರಿದಂತೆ ಎಸ್ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್, ದಸಂಸ ಮುಖಂಡರಾದ ಕಬ್ಬಿಗೆರೆ ಮೋಹನ್, ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಹಸನಬ್ಬ, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.