ಉಡುಪಿ ಪಾದಚಾರಿ ರಸ್ತೆ ಅಕ್ರಮಿಸಿಕೊಂಡ ಹೂವಿನ ವ್ಯಾಪಾರಿಗಳು- ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ..!
ಗೌರಿಗಣೇಶ ಹಬ್ಬಕ್ಕೆ ಕೆಲವು ದಿನಗಳು ಇನ್ನೂ ಬಾಕಿ ಇರುವಾಗಲೇ, ಕವಿ ಮುದ್ದಣ ಮಾರ್ಗದ ತ್ರಿವೇಣಿ ಸರ್ಕಲ್ ಬಳಿಯ ಪಾದಚಾರಿ ರಸ್ತೆಯಲ್ಲಿ ಟಾರ್ಪಲು ಹೊದಿಸಿ, ಪಾದೆಕಲ್ಲು ಹಾಕಿ ತಮ್ಮ ಮಾರಾಟದ ಸ್ಥಳಗಳನ್ನು ಹೂವಿನ ವ್ಯಾಪಾರಿಗಳು ಕಾಯ್ದಿರಿಸಿಕೊಂಡಿದ್ದಾರೆ.
ಸಾರ್ವಜನಿಕರು, ಹಿರಿಯ ನಾಗರಿಕರು, ಶಾಲಾ ವಿದ್ಯಾರ್ಥಿಗಳು, ದಿವ್ಯಾಂಗರು, ನಡೆದಾಡಲು ಸುರಕ್ಷಿತ ಪಾದಚಾರಿ ರಸ್ತೆ ಬಿಟ್ಟು ವಾಹನ ದಟ್ಟಣೆಯ ನಡುರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆ ಸ್ಥಳ ಇದ್ದು, ಜನ ನಡೆದಾಡಲು ಸಮಸ್ಯೆ ಎದುರಾಗಿದೆ. ಸಮಸ್ಯೆಯ ಕುರಿತು ಸಾರ್ವಜನಿಕರ ದೂರುಗಳು ಕೇಳಿಬಂದಿವೆ. ನಗರಸಭೆ ತಕ್ಷಣ ಸಮಸ್ಯೆಯತ್ತ ಗಮನ ಹರಿಸಬೇಕಾಗಿದೆ ಎಂದು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.