ಪೆರಂಪಳ್ಳಿ ರಸ್ತೆ ಅವ್ಯವಸ್ಥೆ- ಶಾಸಕರನ್ನು ತರಾಟೆಗೆ ತೆಗೆದುಕೊಂಡು ಯುವತಿಯ ವಿಡಿಯೋ ವೈರಲ್
ಉಡುಪಿ ಆ.27(ಉಡುಪಿ ಟೈಮ್ಸ್ ವರದಿ):ಪೆರಂಪಳ್ಳಿ -ಮಣಿಪಾಲದ ರಸ್ತೆಗಳ ಅವ್ಯವಸ್ಥೆ ಬಗ್ಗೆ ಸ್ಥಳೀಯ ಯುವತಿಯೊಬ್ಬರು ವೀಡಿಯೋ ಮಾಡಿ ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ತರಾಟೆಗೆ ತೆಗೆಕೊಂಡಿರುವ ವೀಡಿಯೋಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೈರಲ್ ವೀಡಿಯೋದಲ್ಲಿ ಮಣಿಪಾಲದ ಯುವತಿಯೊಬ್ಬರು. “ನಾವು ಇಷ್ಟು ವರ್ಷಗಳಿಂದ ಟೋಲ್ ಕಟ್ಟುತ್ತಿದ್ದೇವೆ, ರಸ್ತೆ ತೆರಿಗೆ, ವಾಹನ ತೆರಿಗೆ ಗಳನ್ನು ಕಟ್ಟುತ್ತಿದ್ದೇವೆ ಇದು ಯಾರ ಹೊಟ್ಟೆಗೆ ಮಣ್ಣು ಹಾಕಲು. ನಾವು ಕೇಳಿದರೆ ನಾವು ರಸ್ತೆ ಮಾಡಿದ್ದೇವೆ, ಚರಂಡಿ ಮಾಡಿದ್ದೇವೆ, ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಅಂತಾರೆ. ನೀವು ಯಾವುದಾದರೂ ಕೆಲಸ ಸರಿಯಾಗಿ ಮಾಡಿದ್ದೀರಾ. ನೀವು ನಿಮ್ಮ ಮನೆಗೆ ಹೋಗುವಾಗ ಪೆರಂಪಳ್ಳಿಯ ಇದೇ ಮಾರ್ಗವಾಗಿ ಹೋಗುತ್ತೀರಲ್ಲಾ ನಿಮಗೆ ಸ್ವಲ್ಪವಾದರೂ ಬೇಜರಾಗುತ್ತಿದೆಯೇ” ಎಂದು ಪ್ರಶ್ನಿಸಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದರ ಜೊತೆಗೆ “ನಾನು ಇಂದು ಕೆಲಸ ಬಿಟ್ಟು ಮನೆಗೆ ಬರುವಾಗ ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಯಿಂದಾಗಿ ಬೈಕ್ ಸವಾರ ವ್ಯಕ್ತಿಯೊಬ್ಬರು ರಸ್ತೆಯ ಹೊಂಡಕ್ಕೆ ಬಿದ್ದುಕೊಂಡಿದ್ದರು. ಇಂತಹ ಎಷ್ಟೊಂದು ಅಪಘಾತಗಳು ಆಗಿರಬಹುದು. ಒಂದು ವೇಳೆ ಅವರಿಗೆ ಏನಾದರೂ ಆಗಿದ್ದರೆ. ಅಥವಾ ಅವರೊಂದಿಗೆ ಮಗುವೇನಾದರೂ ಇರುತ್ತಿದ್ದರೆ ಏನಾಗುತ್ತಿತ್ತು. ನೀವು ಸರಕಾರಿ ವಾಹನದಲ್ಲಿ ಹೋಗುತ್ತೀರ ನಿಮಗೆ ರಸ್ತೆಯಲ್ಲಿ ಹೊಂಡಗಳು ಇದೆಯಾ..? ಇಲ್ಲವಾ..?, ಹೊಂಡಕ್ಕೆ ಬಿದ್ದರೆ ಏನಾಗುತ್ತದೆ ಎಂಬುದರ ಪರಿವೇ ಇರುವುದಿಲ್ಲ. ನಾವು ಕಷ್ಟಪಟ್ಟು ಕಾರು, ಬೈಕು ತೆಗೆದುಕೊಳ್ಳುತ್ತೇವೆ. ನಮ್ಮ ವಾಹನ ಇಂತಹ ರಸ್ತೆಯಿಂದ ಅಪಘಾತಗಳು ಆದಾಗ ಹೇಗೆ ಆಗುತ್ತದೆ. ನಮ್ಮ ಕಣ್ಣ ಮುಂದೆ ಅಪಘಾತಗಳು ಆದಾಗ ಹೇಗೆ ಆಗುತ್ತದೆ. ನಮಗೇ ಏನಾದರೂ ಆದರೆ ನಾವು ಯಾರ ಬಳಿ ಹೋಗುವುದು. ಆಸ್ಪತ್ರೆ ಹಣ, ವಾಹನ ಹಣ ನೀವು ಕೊಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಹಾಗೂ ನೀವು ಅಂಬಾಗಿಲು ಪೆರಂಪಳ್ಳಿ ಹೋಗುವ ರಸ್ತೆ ಮಾಡಿದ್ದೀರ ಒಂದಾದರೂ ಫೇವರ್ ಫಿನಿಶ್ ಮಾಡಿದ್ದೀರಾ. ನಿಮಗೆ ಸ್ವಲ್ಪನಾದರೂ ಕಾಮನ್ ಸೆನ್ಸ್, ಮನುಷತ್ವ, ಇದ್ಯಾ. ಇಲ್ಲಿ ರಸ್ತೆ ಕಡಿಮೆ ಹೊಂಡಗಳೇ ಹೆಚ್ಚು ಇದೆ. ಯಾರೂ ಕೇಳುವವರಿಲ್ಲ. ನೀವು ಕಾಂಗ್ರೆಸ್ ಕಾರ್ಯತರ್ಕ, ಬಿಜೆಪಿ ಕಾರ್ಯಕರ್ತ ಅಂತ ಹೇಳುತ್ತೀರಾ. ನೀವು ಯಾರಾದರೂ ಅವರ ರ ಮನೆಗೆ ಹೋಗಿ ನಾವು ಯಾಕೆ ತೆರಿಗೆ ಕಟ್ಟುತ್ತಿದ್ದೇವೆ ಸರ್ ಎಂದು ಕೇಳಿದ್ದೀರಾ ಎಂದಿದ್ದಾರೆ.
ಇನ್ನು ಅಂಬಾಗಿಲು ಕಲ್ಸಂಕ ರಸ್ತೆಯಲ್ಲಿ ಗುರಿ ಎಲ್ಲಿದೆ, ಮ್ಯಾನ್ ಹೋಲ್ ಎಲ್ಲಿದೆ ಎಂದೇ ಗೊತ್ತಾಗುವುದಿಲ್ಲ. ಮಂಗಳೂರಿನಲ್ಲಿ ಕೊನೆ ಪಕ್ಷ ಪ್ರಧನ ಮಂತ್ರಿ ಬರುತ್ತಾರೆ ಅಂತಾದರೂ ಅಲ್ಲಿ ರಸ್ತೆ ಸರಿ ಆಗುತ್ತಿದೆ. ನಮ್ಮ ಊರಲ್ಲಿ ರಸ್ತೆ ಸರಿ ಆಗಬೇಕಾದರೆ ಯಾರು ಬರಬೇಕು. ನಿಮ್ಮ ಕಿಸೆಯ ಹಣ ತೆಗೆದು ರಸ್ತೆ ಸರಿ ಮಾಡುವುದು ಬೇಡ. ನಾವು ತೆರಿಗೆ ಕಟ್ಟುತ್ತಿದ್ದೇವೆ ಅದೇ ತೆರಿಗೆ ಹಣ ತೆಗೆದು ನಮಗೆ ಒಂದು ಸರಿಯಾದ ರಸ್ತೆ ಮಾಡಿ ಕೊಡಿ. ಈ ರಸ್ತೆಯಲ್ಲಿ ಹೋಗಿ ಸಾಕಾಗಿದೆ ಎಂದಿದ್ದಾರೆ ಹಾಗೂ ಆದಷ್ಟು ಬೇಗ ಈ ವಿಡಿಯೋ ಶೇರ್ ಮಾಡಿ. ಅದು ಆದಷ್ಟು ಬೇಗ ಶಾಸಕರ ಮೊಬೈಲ್ ಗೆ ವಿಡಿಯೋ ತಲುಪಿ, ಆದಷ್ಟು ಬೇಗ ನಮ್ಮ ರಸ್ತೆ ಸರಿ ಆಗಲಿ. ಇದು ಬಿಟ್ಟು ಬೇರೆ ಕಡೆ ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಯನ್ನು ಸರಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.