ಕೆಪಿಟಿಸಿಎಲ್’ ಪರೀಕ್ಷೆ ಅಕ್ರಮದ ಹೊಣೆ ಇಂಧನ ಸಚಿವ ಸುನಿಲ್ ಹೊರಬೇಕು- ಸಿದ್ದರಾಮಯ್ಯ
ಬೆಂಗಳೂರು ಆ.27: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ನ ಕಿರಿಯ ಎಂಜಿನಿಯರ್ ಗಳ ಹುದ್ದೆ ಭರ್ತಿಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಹೊಣೆಯನ್ನು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೊರಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಅವರು, ಕಿರಿಯ ಎಂಜಿನಿಯರ್ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ವರದಿ ಇನ್ನೂ ತಮ್ಮ ಕೈಸೇರಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಲು ಸುನಿಲ್ ಕುಮಾರ್ ಯತ್ನಿಸುತ್ತಿದ್ದಾರೆ. ಅಕ್ರಮಕ್ಕೆ ಕಾರಣರಾದ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಈ ಹಗರಣದ ಹೊಣೆಯನ್ನು ಸಚಿವರೇ ಹೊತ್ತುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
‘ಪಿಎಸ್‍ಐ ನೇಮಕಾತಿ ಹಗರಣದ ತನಿಖೆ ಇನ್ನೂ ಮುಗಿದಿಲ್ಲ. ಪ್ರಕರಣದಲ್ಲಿ ಭಾಗಿಯಾದ ಹಿರಿ ತಲೆಗಳನ್ನು ಇನ್ನೂ ಬಂಧಿಸಿಲ್ಲ. ಅಷ್ಟರಲ್ಲಾಗಲೇ ಕೆಪಿಟಿಸಿಎಲ್ ನೇಮಕಾತಿ ಅಕ್ರಮ ಹೊರಬಿದ್ದಿದೆ’ ಎಂದಿದ್ದಾರೆ.ಹಾಗೂ ‘ಪಿಎಸ್‍ಐ ನೇಮಕಾತಿ ಹಗರಣದ ಬಂಧಿತ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ವಿರುದ್ಧ ಪೂರ್ಣ ಪ್ರಮಾಣದ ಆರೋಪಪಟ್ಟಿಯನ್ನೂ ಸಲ್ಲಿಸಿಲ್ಲ. ಈ ಹಗರಣದಲ್ಲಿ ಸಂಗ್ರಹವಾದ ಕೋಟಿ ಕೋಟಿ ಹಣ ಯಾವ ಸಚಿವರ ಜೇಬು ಸೇರಿದೆ ಎಂಬುದನ್ನೂ ಬಹಿರಂಗಪಡಿಸಿಲ್ಲ. ಮಾಹಿತಿ ಮುಚ್ಚಿಡುತ್ತಿರುವ ಸರ್ಕಾರದ ಉದ್ದೇಶ ಏನಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.