ಉಡುಪಿ: ಮೀನು ಮಾರಾಟದ ಮಹಿಳೆಯರಿಗೆ ನಿರ್ಮಾಣವಾಗುತ್ತಿದ್ದ ಶೆಡ್ ಕೆಡವಿದ ನಗರ ಸಭೆ- ಸ್ಥಳೀಯರ ಆಕ್ರೋಶ

ಉಡುಪಿ ಆ.26(ಉಡುಪಿ ಟೈಮ್ಸ್ ವರದಿ): ಮೀನುಗಾರರಿಗಾಗಿ ನಗರದ ಸ್ವಾಗತ ಗೋಪುರ ಬಳಿ ನಿರ್ಮಿಸಲಾಗಿದ್ದ ಶೆಡ್ ನ್ನು ಇಂದು ನಗರ ಸಭೆ ತೆರವುಗೊಳಿಸಿದೆ.

ಈ ವೇಳೆ ಸ್ಥಳದಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಸೇರಿದಂತೆ ಸ್ಥಳೀಯರು ನಗರ ಸಭೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು. ಹಾಗೂ ಏಕಾಏಕಿ ನೋಟಿಸ್ ನೀಡದೆ ಮಾರುಕಟ್ಟೆ ತೆರವುಗೊಳಿಸಬೇಡಿ, ಮೀನು ಮಾರುಕಟ್ಟೆ ಧ್ವಂಸ ಮಾಡಿ ಬಡ ಮೀನುಗಾರರ ಹೊಟ್ಟೆಗೆ ಹೊಡೆಯಬೇಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ನಗರ ಸಭೆಯ ಅಧಿಕಾರಿಗಳು, ಮಾರುಕಟ್ಟೆ ಅನಧಿಕೃತವಾಗಿ ಕಾರ್ಯಚರಿಸುತ್ತಿದೆ.

ಹಾಗಾಗಿ ಕಾನೂನು ಪ್ರಕಾರ ತೆರವುಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. 40 ವರ್ಷಗಳಿಂದ ಇಲ್ಲಿ ಮೀನು ಮಾರುವ ಮಹಿಳೆಯರ ಅನುಕೂಲಕ್ಕಾಗಿ ಸ್ಥಳೀಯ ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ಸ್ವಂತ ಖರ್ಚಿನಲ್ಲಿ ಶೆಡ್ ನಿರ್ಮಿಸಿದ್ದರು. ಇದೀಗ ನಿರ್ಮಾಣ ಹಂತದಲ್ಲಿರುವಾಗಲೇ ನಗರ ಸಭೆ ಜೆಸಿಬಿ ಬಳಸಿ ಶೆಡ್ ಕೆಡವಿ ಹಾಕಿದ್ದು, ನಗರಸಭೆ ವಿರುದ್ಧ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೂ ಅಕ್ರಮ ನಿರ್ಮಾಣದ ನೆಪದಲ್ಲಿ ಬಡ ಮೀನುಗಾರರ ಶೆಡ್ ಉರುಳಿಸಲಾಗಿದೆ. ನಗರದ ಪ್ರತಿಷ್ಠಿತ ಕಟ್ಟಡಗಳಿಗೆ ಇಲ್ಲದ ಕಾನೂನು ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಇದರ ಜೊತೆಗೆ ದಶಕಗಳಿಂದ ಬೇಡಿಕೆ ಇಟ್ಟರೂ ನಗರಸಭೆ ಮೀನುಗಾರರಿಗೆ ವ್ಯವಸ್ಥೆ ಕಲ್ಪಿಸಿರಲಿಲ್ಲ ಹಾಗಾಗಿ ತಾತ್ಕಾಲಿಕ ನೆಲೆಯಲ್ಲಿ ಶೆಡ್ ನಿರ್ಮಾಣಕ್ಕೆ ನಗರಸಭಾ ಸದಸ್ಯೆ ಮುಂದಾಗಿದ್ದರು. ಆದರೆ ನಗರ ಸಭೆಯವರು ನೋಟಿಸ್ ನೀಡದೆ, ಕಟ್ಟಡ ಸಾಮಾಗ್ರಿಗಳನ್ನು ಬಳಸಿಕೊಳ್ಳಲು ಅವಕಾಶವಿಲ್ಲದಂತೆ ಶೆಡ್ ಕೆಡವಿ ಹಾಕಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಶೆಡ್ ತೆರವು ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಬಿಗುವಿನ ಮಾತಾವರಣ ನಿರ್ಮಾಣ ಗೊಂಡಿದ್ದು ಪೊಲೀಸರನ್ನು ನಿಯೋಜಿಸಲಾಗಿತ್ತು.

ಇನ್ನು ಈ ಬಗ್ಗೆ ‘ಉಡುಪಿ ಟೈಮ್ಸ್‘ ಜೊತೆ ಮಾತನಾಡಿ ಸ್ಪಷ್ಟನೆ ನೀಡಿದ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅವರು, ಈ ಶೆಡ್ ನ್ನು ಸರಕಾರಿ ಜಾಗದಲ್ಲಿ ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ನಿರ್ಮಿಸಲಾಗಿತ್ತು. ಈ ಬಗ್ಗೆ ಸ್ಥಳೀಯರಿಂದ ಪೌರಾಯುಕ್ತರಿಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಅನಧಿಕೃತ ಶೆಡ್ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಅದರಂತೆ ಇಂದು ಸಂಜೆ ನಗರ ಸಭೆಯ ಸಹಾಯಕ ಅಭಿಯಂತರ ಯಶವಂತ್ ಹಾಗೂ ಕಂದಾಯ ಅಧಿಕಾರಿ ಪೌರ ಕಾರ್ಮಿಕರೊಂದಿಗೆ ಸ್ಥಳಕ್ಕೆ ತೆರಳಿ ಶೆಡ್ ತೆರವು ಗೊಳಿಸಿದ್ದಾರೆ.ಬಳಿಕ ಬಂದ ಸ್ಥಳೀಯರು, ನಗರ ಸಭೆಯ ಸದಸ್ಯೆ ಹಾಗೂ ಅವರ ಪತಿ ಸೇರಿ ನಗರ ಸಭೆ ಅಧಿಕಾರಿಗಳಿಗೆ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ ಎಂದು ಅವರು ತಿಳಿಸಿದರು.

1 thought on “ಉಡುಪಿ: ಮೀನು ಮಾರಾಟದ ಮಹಿಳೆಯರಿಗೆ ನಿರ್ಮಾಣವಾಗುತ್ತಿದ್ದ ಶೆಡ್ ಕೆಡವಿದ ನಗರ ಸಭೆ- ಸ್ಥಳೀಯರ ಆಕ್ರೋಶ

  1. If illegal sheds are destroyed why not Santhekatte junction fish market still stands which is right in centre of bus stand and brings foul smell. Moreover these people are already having a municipality built building across the highway

Leave a Reply

Your email address will not be published. Required fields are marked *

error: Content is protected !!