ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು: ಪೂರ್ಣ ಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾಗಿ ದಿ.ರಾಜೇಶ್ವರಿ ನೇಮಕ!
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡುವಲ್ಲಿ ಸರ್ಕಾರ ಎಡವಟ್ಟು ಮಾಡಿಕೊಂಡಿದೆ. ಜೀವಂತ ಇಲ್ಲದವರಿಗೂ ಪ್ರತಿಷ್ಠಾನದ ಸದಸ್ಯ ಸ್ಥಾನ ನೀಡಿರುವ ಸರ್ಕಾರ ಮುಜುರಕ್ಕೊಳಗಾಗಿದೆ.
ದಿವಂಗತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪತ್ನಿ ದಿವಂಗತ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿಗೂ ಸದಸ್ಯ ಸ್ಥಾನ ನೀಡಿ ಸರ್ಕಾರ ಮಹಾ ಎಡವಟ್ಟು ಮಾಡಿದೆ. ಚಿಕ್ಕಮಗಳೂರಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾಗಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಹೆಸರನ್ನು ಆಯ್ಕೆ ಮಾಡಲಾಗಿದೆ.
ಖ್ಯಾತ ಲೇಖಕ ಹಾಗೂ ಚಿಂತಕ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ಲೇಖಕಿ ರಾಜೇಶ್ವರಿ ಅವರು ಕಳೆದ ಡಿಸೆಂಬರ್ ತಿಂಗಳಲ್ಲಿ ನಿಧನರಾಗಿದ್ದಾರೆ. ಆದರೆ, ಮೃತರ ಹೆಸರು ಇದೀಗ ಪ್ರತಿಷ್ಠಾನದ ಸದಸ್ಯರ ಪಟ್ಟಿಯಲ್ಲಿರುವುದು ಅಚ್ಚರಿ ಉಂಟು ಮಾಡಿದೆ. ರಾಜ್ಯ ಸರ್ಕಾರದ ಈ ಎಡವಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಡವಟ್ಟಿನಿಂದ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಇದು ತಪ್ಪಾಗಿ ಸೇರ್ಪಡೆಯಾದ ಹೆಸರಾ ಅಥವಾ ಅದೇ ಹೆಸರಿನ ಬೇರೆಯವರಾ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ .