ಉಡುಪಿ ರಜತ ಮಹೋತ್ಸವ: ಮಾಜಿ ಸಚಿವರ ನಿರ್ಲಕ್ಷ್ಯ-ಕಾಪು ಮಹಿಳಾ ಕಾಂಗ್ರೆಸ್ ಖಂಡನೆ
ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದು 25 ವರ್ಷಗಳು ಪೂರ್ಣ ಗೊಳ್ಳುತ್ತಿದ್ದು, “ರಜತ ಮಹೋತ್ಸವ” ಆಚರಣೆಯ ಸಂಭ್ರಮದಲ್ಲಿರುವುದು ಜಿಲ್ಲೆಯ ನಾಗರಿಕರಾದ ನಮಗೆಲ್ಲ ಹೆಮ್ಮೆಯ ವಿಚಾರ.
ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲಾಡಳಿತಕ್ಕೆ ಅಗತ್ಯವಿರುವ ಹಲವಾರು ಇಲಾಖೆಗಳು, ಅದಕ್ಕೆ ಅವಶ್ಯವಿರುವ ಅನೇಕ ಮೂಲಭೂತ ಸೌಕರ್ಯಗಳು, ಅದೇ ರೀತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರಿ ಸೇವೆಗಳು ಸುಲಭವಾಗಿ ಲಭ್ಯವಾಗಿಸುವಲ್ಲಿ ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದು ಇಂದು “ರಜತ ಮಹೋತ್ಸವ” ಆಚರಿಸುತ್ತಿರುವವರೆಗೆ ಅನೇಕ ಜನಪ್ರತಿನಿಧಿಗಳು, ಜಿಲ್ಲೆಗೆ ವಿವಿಧ ರೀತಿಯಲ್ಲಿ, ಜಿಲ್ಲೆಯ ಅಭಿವೃದ್ಧಿಗಾಗಿ ಹಲವಾರು ಕೊಡುಗೆಗಳನ್ನು ನೀಡಿರುತ್ತಾರೆ.
ಅವರೆಲ್ಲರನ್ನೂ ಈ ರಜತ ಸಂಭ್ರಮಾಚರನೆಯ ಸಂದರ್ಭದಲ್ಲಿ ಸೌಜನ್ಯಕ್ಕಾದರೂ ಸ್ಮರಿಸುವುದು ರಾಜಧರ್ಮವೆನಿಸುತ್ತದೆ. ಉಡುಪಿ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರು ಹಾಗೂ ಮಾಜಿ ಸಂಸದರಾದ ವಿನಯ್ ಕುಮಾರ್ ಸೊರಕೆಯವರು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಉಡುಪಿ ಜಿಲ್ಲೆಯ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಸೇವೆಗೈದು ಅಪಾರವಾದ ಕೊಡುಗೆಗಳನ್ನು ನೀಡಿರುವುದು ಈಗಿನ ಜಿಲ್ಲಾಡಳಿತ ಹಾಗೂ ಸರ್ಕಾರವು ಮರೆತಂತಿದೆ…
ರಜತ ಮಹೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲೆಗೆ ಸಂಬಂಧ ಪಡದ ಜನಪ್ರತಿನಿಧಿಗಳ ಹಲವು ಹೆಸರನ್ನು ಮುದ್ರಿಸುವಾಗ, ವಿನಯ್ ಕುಮಾರ್ ಸೊರಕೆಯವರ ಹೆಸರು ಕೈಬಿಟ್ಟಿರುವುದು ರಜತ ಮಹೋತ್ಸವ ಆಚರಣಾ ಸಮಿತಿಯ ಅಧಿಕಾರಿಗಳ ಮತ್ತು ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳ ಜಾಣ ಮರೆವೋ… ಅಲ್ಲ ರಾಜಕೀಯ ದ್ವೇಷವೋ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಯಕರಾದ ವಿನಯ್ ಕುಮಾರ್ ಸೊರಕೆಯವರ ಹೆಸರಿಲ್ಲದ ಆಮಂತ್ರಣ ಪತ್ರಿಕೆಯ ಮೂಲಕ ನಮ್ಮನ್ನು ಆಮಂತ್ರಿಸಿದರೂ, ನಾವು ಆ ಆಮಂತ್ರಣವನ್ನು ಸ್ವೀಕರಿಸಿ ಭಾಗವಹಿಸಿದರೆ ನಮ್ಮ ನಾಯಕರಿಗೆ ಅಗೌರವ ತೋರಿಸಿದಂತಾಗುವುದಿಲ್ಲವೆ ಎಂದು ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಎಸ್. ಶೆಟ್ಟಿ ಹೇಳಿದ್ದಾರೆ.