ಸೆ.2ರ ಮಂಗಳೂರಿಗೆ ಮೋದಿ ಭೇಟಿ ನಡುವೆ ನಳಿನ್ ವಿರುದ್ಧ ಹೆಚ್ಚಿದ ಆಕ್ರೋಶ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೆ. 2ರಂದು ಮಂಗಳೂರಿಗೆ ಭೇಟಿ ನೀಡಲಿದ್ದು, ಅದ್ಧೂರಿ ಸ್ವಾಗತಕ್ಕೆ ಬಿಜೆಪಿ ಭರದ ಸಿದ್ಧತೆ ನಡೆಸುತ್ತಿದೆ.
ಆದರೆ, ಇನ್ನೊಂದೆಡೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇನ್ನೊಂದು ಅವಧಿಗೆ ಸಂಸದರಾಗಿ ಮುಂದುವರಿಯಲು ಅವಕಾಶ ಕಲ್ಪಿಸಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರ ಅಭಿಯಾನ ವ್ಯಾಪಕವಾಗಿ ಮುಂದುವರಿದಿದೆ.
ನಾವು ಮಂಗಳೂರಿಗರು, ದೇಶದಲ್ಲೇ ಹಿಂದುತ್ವದ ಭದ್ರಕೋಟೆಯಾಗಿ ಕರಾವಳಿಯನ್ನು ಕಟ್ಟಿಕೊಂಡವರು. ನಮಗೆ ಹಿಂದುತ್ವದ ಜೊತೆಗೆ ಮಂಗಳೂರಿನ ಅಭಿವೃದ್ಧಿಯ ದೃಷ್ಟಿಕೋನ ಹೊಂದಿರುವ ನಾಯಕನ ಅಗತ್ಯವಿದೆ. ಸೆ. 2ರಂದು ಮೋದಿಜಿಯನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೊದಲು ನಮ್ಮ ಜಿಲ್ಲೆಯ ಸಂಸದರ ಬದಲಾವಣೆಯ ಕೂಗು ಕೇಳಿ ಬರಲಿ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ‘ಪೋಸ್ಟ್ ಕಾರ್ಡ್’ ಸಂದೇಶವೊಂದನ್ನು ಹರಿಯಬಿಟ್ಟಿದೆ. ಈ ಸಂದೇಶವನ್ನು ‘ವಾಟ್ಸ್ಆ್ಯಪ್ ಸ್ಟೇಟಸ್’ ಹಾಕಿಕೊಂಡು ಅನೇಕರು ಬೆಂಬಲ ಸೂಚಿಸಿದ್ದಾರೆ.
ಮಂಗಳೂರು– ಹಾಸನ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚತುಷ್ಪಥ ಕಾಮಗಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಂಟುತ್ತಾ ಸಾಗಿದೆ. ಕಾಮಗಾರಿ ನಡೆಯುವಲ್ಲಿ ಹೆದ್ದಾರಿ ಕಂಬಳದ ಗದ್ದೆಯಂತಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ಸುರತ್ಕಲ್ ಟೋಲ್ ಪ್ಲಾಜಾ ರದ್ದತಿ ಭರವಸೆ ಇನ್ನೂ ಈಡೇರಿಲ್ಲ. ಜಿಲ್ಲೆಯಲ್ಲಿ ಟೋಲ್ ನೀಡಿ ಬಳಸುವ ಹೆದ್ದಾರಿ ಗಳೆಲ್ಲವೂ ಹೊಂಡಮಯವಾಗಿವೆ. ಇವೆಲ್ಲವೂ ಜಿಲ್ಲೆಯ ಕಟ್ಟರ್ ಹಿಂದುತ್ವವಾದಿಗಳ ಕೆಂಗಣ್ಣಿಗೂ ಗುರಿಯಾಗಿವೆ.
ಹತ್ಯೆಗೊಳಗಾದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಅಂತಿಮ ಯಾತ್ರೆ ವೇಳೆ ಪಕ್ಷದ ಕಾರ್ಯಕರ್ತರು ನಳಿನ್ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರವೀಣ್ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ವೇಳೆಯೂ ಪ್ರತಿಭಟನೆಯ ಕೂಗೆದ್ದಿತ್ತು. ಈ ಬೆಳವಣಿಗೆಯಿಂದ ವಿಚಲಿತಗೊಂಡ ಬಿಜೆಪಿ ಮುಖಂಡರು, ಕೇರಳದ ಕೊಚ್ಚಿಗೆ ಸೆ. 2ರಂದು ಆಗಮಿಸಲಿರುವ ಪ್ರಧಾನಿಯನ್ನು ಮಂಗಳೂರಿಗೆ ಕರೆಸಿ ಕಾರ್ಯಕರ್ತರ ಆಕ್ರೋಶ ತಣಿಸುವ ಪ್ರಯತ್ನಕ್ಕೆ ಕೈಹಾಕಿದ್ದರು.
‘ಪಕ್ಷದ ಕಾರ್ಯಕರ್ತರಲ್ಲಿ ಅಂತಹ ಭಾವನೆ ಇಲ್ಲ. ಪ್ರಧಾನಿ ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷದ ವತಿಯಿಂದಲೂ ಸಭೆ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಎಂ. ಹೇಳಿದ್ದಾರೆ.