ಆ.27-28: ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಮೃತ ಸಂಭ್ರಮ

ಉಡುಪಿ: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾವು 75ವರ್ಷಗಳನ್ನು ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಅಮೃತ ಸಂಭ್ರಮವನ್ನು ಆ.27 ಹಾಗೂ 28ರಂದು ಮುಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಪುರಂದರ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಬಂಧುಗಳಲ್ಲಿ ಏಕತೆಯನ್ನು ಸಾಧಿಸುವ ಉದ್ದೇಶದಿಂದ ಈ ಕಾರ್ಯ ಕ್ರಮವನ್ನು ಆಯೋಜಿಸಲಾಗಿದ್ದು, ಎರಡು ದಿನಗಳ ಈ ಕಾರ್ಯಕ್ರಮದಲ್ಲಿ 15 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಆ.27ರಂದು ಬೆಳಗ್ಗೆ 9.30ಕ್ಕೆ ಅಮೃತ ಮಹೋತ್ಸವವನ್ನು ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿರುವರು. ಶ್ರೀಕ್ಷೇತ್ರ ಕಟೀಲು ವೇದ ಮೂರ್ತಿ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣ ಆಶೀರ್ವಚನ ನೀಡಲಿರವರು. ಈ ಸಂದರ್ಭದಲ್ಲಿ ಮಾಜಿ ಯೋಧರು ಹಾಗೂ ನಿವೃತ್ತ ಪೊಲೀಸರನ್ನು ಸನ್ಮಾನಿಸ ಲಾಗುವುದು. ವಿದ್ಯಾರ್ಥಿ ವೇತನ ವಿತರಣೆ, ಮಹಿಳಾ ಸಮಾವೇಶ, ಸಮಾಜ ಸಂಬಂಧಿ ವಿವಿಧ ಗೋಷ್ಠಿಗಳು ನಡೆಯಲಿವೆ.

28ರಂದು ರಕ್ತದಾನ ಶಿಬಿರ,, ನೇತ್ರ ತಪಾಸಣಾ ಶಿಬಿರ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಅಪರಾಹ್ನ ೩ಗಂಟೆಗೆ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭದಲ್ಲಿ ನಡೆಯಲಿದ್ದು, ಇದೇ ಸಂದರ್ಭದಲ್ಲಿ ‘ಪದ್ಮತಂತು’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಗುವುದು. ಆ.26 ರಂದು ಅಪರಾಹ್ನ 3 ಗಂಟೆಗೆ ಶ್ರೀವೀರಭದ್ರ ಮಾಹಾಮ್ಮಾಯಿ ದೇವಸ್ಥಾನ ಮಾನಂಪಾಡಿ ಮುಲ್ಕಿಯಿಂದ ಬಪ್ಪನಾಡು ದೇವಸ್ಥಾನದವರೆಗೆ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಅಧ್ಯಕ್ಷ ಎಂ.ಜಯರಾಮ್ ಮಂಗಳೂರು, ಕೋಶಾಧಿಕಾರಿ ಭಾಸ್ಕರ್ ಶೆಟ್ಟಿಗಾರ್, ಸಮಿತಿಯ ಉಪಾಧ್ಯಕ್ಷ ರವಿ ಶೆಟ್ಟಿಗಾರ್, ಕೋಶಾಧಿಕಾರಿ ಸತೀಶ್ ಶೆಟ್ಟಿಗಾರ್ ಆತ್ರಾಡಿ, ಸಾಂಸ್ಕೃತಿಕ ಸಂಚಾಲಕ ಜಯರಾಮ್ ಶೆಟ್ಟಿಗಾರ್, ಪದ್ಮಶಾಲಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಉಮೇಶ್ ಕುಮಾರ್ ಮಾರ್ಪಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!