ಪ್ರಧಾನಿ ಮೋದಿ ಸೆ.2 ರಂದು ಮಂಗಳೂರಿಗೆ- 1200 ಕೋಟಿ ರೂ. ಕಾಮಗಾರಿಗೆ ಶಿಲಾನ್ಯಾಸ
ಮಂಗಳೂರು, ಆ.24:ಪ್ರಧಾನಿ ನರೇಂದ್ರ ಮೋದಿ ಅವರು ಸೆ.2 ರಂದು ಮಂಗಳೂರಿಗೆ ಆಗಮಿಸಲಿದ್ದು, ನವಮಂಗಳೂರು ಬಂದರು ಪ್ರಾಧಿಕಾರ (ಎನ್.ಎಂ.ಪಿ.ಎ)ದಲ್ಲಿ ಸುಮಾರು 1200 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಸೆ.2 ರಂದು ಬೆಳಗ್ಗೆ ಕೊಚ್ಚಿನ್ ಶಿಫ್ ಯಾರ್ಡ್ ನಲ್ಲಿ ದೇಶದ ಪ್ರಥಮ ಸ್ವದೇಶಿ ನಿರ್ಮಿತ ವಿಕ್ರಾಂತ್ ಯುದ್ಧ ವಾಹಕ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುವರು. ಅಪರಾಹ್ನ ಮಂಗಳೂರಿಗೆ ಆಗಮಿಸಿ ಎನ್‍ಎಂಪಿಎ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ದೆಹಲಿಗೆ ತೆರಳುವ ಸಾಧ್ಯತೆಗಳಿವೆ. ಅವರ ಪ್ರವಾಸದ ಅಧಿಕೃತ ವೇಳಾಪಟ್ಟಿ ಇನ್ನೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ. ನವಮಂಗಳೂರು ಬಂದರಿಗೆ ಭೇಟಿ ನೀಡುವ ಪ್ರಧಾನಿಯವರು ಅಲ್ಲಿ ಈಗಾಗಲೇ ಪೂರ್ಣಗೊಂಡಿರುವ ಅನಘಾ ರಿಫೈನರಿ, ಬರ್ತ್ ನಂ.14 ಸೇರಿದಂತೆ 6 ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಸಾಗರಮಾಲಾ ಯೋಜನೆಯ ಕೆಲವು ಅಭಿವೃದ್ಧಿ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಸಂಸದರು ತಿಳಿಸಿದರು.