ಜಿ.ಎಸ್.ಟಿ. ಸ್ಲ್ಯಾಬ್: 40 ಲಕ್ಷ ವರೆಗೆ ವಹಿವಾಟು ನಡೆಸುವವರಿಗೆ ಜಿ.ಎಸ್.ಟಿ. ಇಲ್ಲ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ವಾರ್ಷಿಕ 40 ಲಕ್ಷ ರೂ ತನಕ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಜಿ.ಎಸ್.ಟಿಯಿಂದ ವಿನಾಯಿತಿ ನೀಡಲಾಗಿದೆ.
ಇನ್ನು ಮುಂದೆ 40 ಲಕ್ಷ ರೂ ವಾರ್ಷಿಕ ವಹಿವಾಟು ನಡೆಸುವವರು ಜಿ.ಎಸ್.ಟಿ. ಸಲ್ಲಿಕೆಯಿಂದ ನಿಶ್ಚಿಂತೆಯಿಂದ ಇರಬಹುದು. ಈವರೆಗೆ 20 ಲಕ್ಷ ರೂ ವರೆಗೆ ವಹಿವಾಟು ನಡೆಸುವವರಿಗೆ ಜಿಎಸ್ ಟಿಯಿಂದ ವಿನಾಯಿತಿ ಇತ್ತು. ಈ ಮೊತ್ತವನ್ನು ಇದೀಗ ದುಪ್ಪಟ್ಟು ಮಾಡಲಾಗಿದೆ.
ಇನ್ನು 40 ಲಕ್ಷ ರೂ ನಿಂದ 1.50 ಕೋಟಿ ರೂ ವರೆಗೆ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಆಯ್ಕೆ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಇದರಲ್ಲಿ ಒಟ್ಟಾರೆ ವಹಿವಾಟಿನ ಶೇಕಡ 1 ರಷ್ಟು ತೆರಿಗೆ ಪಾವತಿಸುವ ಅವಕಾಶವನ್ನು ನೀಡಲಾಗಿದೆ.
ಜಿಎಸ್ ಟಿ ತೆರಿಗೆ ಸ್ಲ್ಯಾಬ್ ಗಳಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದ್ದು, ಶೇಕಡ 28 ರಷ್ಟು ತೆರಿಗೆ ವಿಭಾಗದ ಪಟ್ಟಿಯಲ್ಲಿ ಇದೀಗ ಐಷಾರಾಮಿ ವಸ್ತುಗಳು ಮಾತ್ರ ಇವೆ. 230 ವಸ್ತುಗಳಲ್ಲಿ 200ಕ್ಕೂ ಹೆಚ್ಚು ವಸ್ತುಗಳನ್ನು ಕೆಳಹಂತದ ಸ್ಲಾಬ್ ಗಳಿಗೆ ವರ್ಗಾಯಿಸಲಾಗಿದೆ.
ಸುಲಭದರದ ಮನೆಗಳ ಖರೀದಿಗೆ ನಿಗದಿಪಡಿಸಲಾಗಿದ್ದ ತೆರಿಗೆ ಪ್ರಮಾಣವನ್ನು ಶೇಕಡ 1 ರಷ್ಟು ಇಳಿಕೆ ಮಾಡಲಾಗಿದೆ. ನಿರ್ಮಾಣ ವಲಯದ ಅದರಲ್ಲೂ ಪ್ರಮುಖವಾಗಿ ವಸತಿ ಕ್ಷೇತ್ರದಲ್ಲಿ ತೆರಿಗೆ ಪ್ರಮಾಣ ಶೇಕಡ 5ಕ್ಕೆ ನಿಗದಿ ಮಾಡಲಾಗಿದೆ.