ಕುಂದಾಪುರ: ಶಾಸ್ತ್ರಿ ವೃತ್ತದ ಫ್ಲೈಓವರ್ ತಡೆಗೋಡೆಯಲ್ಲಿ ವಿದ್ಯುತ್ ಶಾಕ್

ಕುಂದಾಪುರ, ಆ.24: ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿರುವ ಫ್ಲೈಓವರ್ ತಡೆಗೋಡೆ ಭೀಮ್ ನಲ್ಲಿ ವಿದ್ಯುತ್ ಪ್ರವಹಿಸುತ್ತಿರುವುದಾಗಿ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಸಂಬಂದಿಸಿ ಟೆಸ್ಟರ್ ಮೂಲಕ ಪರಿಶೀಲಿಸಿದಾಗ ಬೆಳಕು ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ನವಯುಗ ಕಂಪೆನಿಯು ಕೆಲ ತಿಂಗಳ ಹಿಂದೆ ದಾರಿ ದೀಪಗಳ ಸಂಪರ್ಕ ಕಲ್ಪಿಸಿತ್ತು. ಮಳೆಯ ಹಿನ್ನೆಲೆ ವಾಹನ ಸವಾರರು ಫ್ಲೈಓವರ್ ಮೇಲೆ ನಿಂತಿದ್ದ ಸಂದರ್ಭ ಫ್ಲೈಓವರ್ ತಡೆಗೋಡೆ ಭೀಮ್ ನಲ್ಲಿ ಒಂದು ಕಡೆ ವಿದ್ಯುತ್ ಪ್ರವಹಿಸುತ್ತಿರುವ ಅನುಭವವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರಿಬ್ಬರು ಟೆಸ್ಟರ್ ಮೂಲಕ ಪರಿಶೀಲಿಸಿದಾಗ ಟೆಸ್ಟರ್ ನಲ್ಲಿ ಬೆಳಕು ಬಂದಿದ್ದು, ವಿದ್ಯುತ್ ಪ್ರವಹಿಸುತ್ತಿರುವುದು ಖಾತ್ರಿಯಾಗಿದೆ.

ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆ ವಯರಿಂಗ್ ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಈ ರೀತಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರವಲ್ಲದೆ ಮುಂಜಾಗೃತಾ ಕ್ರಮವಾಗಿ ತಕ್ಷಣ ರಾ.ಹೆದ್ದಾರಿ ದಾರಿದೀಪದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸಂಭಾವ್ಯ ಅವಘಡ ತಪ್ಪಿಸಿದ್ದಾರೆ.

ಇನ್ನು ಹೆದ್ದಾರಿ ದಾರಿದೀಪದ ನಿರ್ವಹಣೆ ನವಯುಗ ಕಂಪೆನಿ ಮಾಡಬೇಕಿರುವುದರಿಂದ ಅವರಿಗೆ ಸೂಚನೆ ನೀಡಲಾಗಿದ್ದು ತಕ್ಷಣ ಸಮಸ್ಯೆ ಪರಿಹರಿಸುವ ಬಗ್ಗೆ ಆದೇಶ ನೀಡಲಾಗಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!