ಗುತ್ತಿಗೆದಾರರಿಗೆ ಪಾವತಿಸಬೇಕಿದ್ದ ಲಕ್ಷಾಂತರ ರೂ.ಹಣ ಪ್ರೇಯಸಿ ಖಾತೆಗೆ!

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರಿಗೆ ಪಾವತಿಸಬೇಕಿದ್ದ ಹಣವನ್ನು ತನ್ನ ಪ್ರೇಯಸಿಯ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದ ಬಿಬಿಎಂಪಿಯ ದ್ವಿತೀಯ ದರ್ಜೆ ಸಹಾಯಕ ಎಂ.ಕೆ. ಪ್ರಕಾಶ ಹಾಗೂ ಆತನ ಪ್ರೇಯಸಿಯನ್ನು ಅಮೃತ ಹಳ್ಳಿಯ ಪೊಲೀಸರು ಬಂಧಿಸಿದ್ದಾರೆ.

ಥಣಿಸಂದ್ರದ ಪರಿಶಿಷ್ಟ ಕಾಲೊನಿಯ ಎಂ.ಕೆ.ಪ್ರಕಾಶ ಹಾಗೂ ಯಲಹಂಕದ ನ್ಯೂಟೌನ್‌ನ ಕಾಂಚನಾ ಬಂಧಿತರು.

ಬ್ಯಾಟರಾಯನಪುರದಲ್ಲಿ ಎಸ್‌ಡಿಎ ಆಗಿ ಕೆಲಸ ಮಾಡುತ್ತಿದ್ದ ಪ್ರಕಾಶ್‌ ಬಿಬಿಎಂಪಿಯ ರೂ. 14.7 ಲಕ್ಷವನ್ನು ದುರುಪಯೋಗಪಡಿಸಿಕೊಂಡಿದ್ದ. ಪಾಲಿಕೆ ಎಂಜಿನಿಯರ್‌ ರಾಜೇಂದ್ರ ನಾಯಕ್‌ ಅವರು ದೂರು ನೀಡಿದ್ದರು.

‘2021–22ನೇ ಸಾಲಿನ ಬಿಬಿಎಂಪಿ ಲೆಕ್ಕ ಪರಿಶೋಧನೆಯನ್ನು ಜುಲೈನಲ್ಲಿ ಆರಂಭಿಸಲಾಗಿತ್ತು. ಲೆಕ್ಕ ಪುಸ್ತಕ ಹಾಜರುಪಡಿಸಲು ಲೆಕ್ಕಶಾಖೆಯ ನಿರ್ವಾಹಕ ಎಂ.ಕೆ.ಪ್ರಕಾಶ್‌ಗೆ ಮೌಖಿಕ ಸೂಚನೆ ನೀಡಲಾಗಿತ್ತು. ಆದರೆ, ಲೆಕ್ಕ ಪುಸ್ತಕ ಹಾಜರುಪಡಿಸದೇ ಅನಧಿಕೃತ ರಜೆ ಮೇಲೆ ತೆರಳಿದ್ದ. ಅನುಮಾನಗೊಂಡು ಕೆನರಾ ಬ್ಯಾಂಕ್‌ ಪರಿಶೀಲನೆ ನಡೆಸಿದಾಗ ಕಾಂಚನಾ ಎಂಬುವರ ಖಾತೆಗೆ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿತ್ತು’ ಎಂದು ಮೂಲಗಳು ತಿಳಿಸಿವೆ.

ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಮೇಲಧಿಕಾರಿ ಸಹಿ ಪಡೆದು ಹಣ ಬಿಡುಗಡೆ ಮಾಡಬೇಕಿತ್ತು. ಆದರೆ, ಆರ್‌ಟಿಜಿಎಸ್‌ ಹಾಗೂ ನೆಫ್ಟ್‌ನ ಕೆಲವು ಹಣಕಾಸಿನ ಚೆಕ್‌ಗಳನ್ನು ತಿದ್ದಿ ಬ್ಯೂಟಿಷಿಯನ್‌ ಕಾಂಚನಾ ಹಾಗೂ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ. ಈ ಹಣವನ್ನು ಇಬ್ಬರೂ ವಿಲಾಸಿ ಜೀವನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!