ಯುವಜನತೆಗೆ ಉದ್ಯೋಗ ನೀಡಲು ಜಿಲ್ಲೆಯಲ್ಲಿ ಸಾಫ್ಟ್ವೇರ್ ಉದ್ದಿಮೆ ಅವಶ್ಯಕ-ಕೆ.ಜಯಪ್ರಕಾಶ್ ಹೆಗ್ಡೆ
ಉಡುಪಿ ಆ.23(ಉಡುಪಿ ಟೈಮ್ಸ್ ವರದಿ): ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ ಪ್ರಥಮ ಉಸ್ತುವಾರಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಸಂವಾದ ಕಾರ್ಯಕ್ರಮ ನಗರದ ಐಎಂಎ ಭವನದಲ್ಲಿ ನಡೆಯಿತು.
ಉಡುಪಿ ಸಂಪೂರ್ಣವಾಗಿ ಅಭಿವೃದ್ಧಿ ಆಗಿದೆ ಎಂದು ಹೇಳುವುದಿಲ್ಲ. ಆದರೆ ಉಡುಪಿ ಜಿಲ್ಲೆ ಇಪ್ಪತೈದು ವರ್ಷದ ಹಿಂದೆ ಇದ್ದ ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿಯಾಗಿದೆ. ಅಂದು ಉಡುಪಿ ಈ ಮಟ್ಟಕ್ಕೆ ಅಭಿವೃದ್ಧಿ ಆಗುತ್ತದೆ ಎಂದು ನಾವು ಭಾವಿಸಿರಲಿಲ್ಲ. ಜಿಲ್ಲೆಯ ಮೊದಲ ಉಸ್ತುವಾರಿ ಸಚಿವರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಪತ್ರಕರ್ತರ ಸಂವಾದದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಇಂದು ಬಹಳಷ್ಟು ಅಭಿವೃದ್ಧಿ ಆಗಿದೆ. ಅಂದಿನ ಪರಿಷ್ಥಿತಿ ಈಗನವರಿಗೆ ಗೊತ್ತಿಲ್ಲ ಹಾಗಾಗಿ ಅನೇಕರು ಅಭಿವೃದ್ಧಿ ಆಗಿಲ್ಲ ಎಂದು ಹೇಳುತ್ತಾರೆ. ಉಡುಪಿಯಲ್ಲಿ ಇನ್ನೂ ಕೋಸ್ಟಲ್ ಟೂರಿಸಂ ಅಭಿವೃದ್ಧಿ ಆಗಬೇಕಿದೆ. ಉದ್ಯೋಗ ಸೃಷ್ಟಿಯಲ್ಲಿ ಅಭಿವೃದ್ಧಿಯಾಗಬೇಕಿದೆ ಎಂದರು. ಹಾಗೂ ಯಾವುದೇ ಯೋಜನೆ ಹಾಕಿಕೊಂಡ ಬಳಿಕ ಜನಪ್ರತಿನಿಧಿಗಳು ಬದಲಾವಣೆ ಆದಾಗ ಯೋಜನೆ ಬದಲಾಗ ಬಾರದು ಅದು ಮುಂದುವರೆಯಬೇಕು. ಅದಕ್ಕಾಗಿ ಹಾಕಿಕೊಂಡ ಯೋಜನೆಗಳು ಅಭಿವೃದ್ಧಿ ಆಗಬೇಕು ಎಂದರು.
ಜಿಲ್ಲೆಯಲ್ಲಿ ಅಭಿವೃದ್ಧಿ ಆಗಬೇಕಾದರೆ ಸ್ಥಳೀಯ ಯುವ ಸಮುದಾಯಕ್ಕೆ ಉದ್ಯೋಗ ಸಿಗಬೇಕು. ಇಲ್ಲಿಯೇ ಉದ್ಯೋಗ ಸೃಷ್ಟಿ ಮಾಡಿ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇಲ್ಲಿ ನಿರ್ಮಾಣವಾಗಬೇಕು. ಅಂದು ಅಭಿವೃದ್ಧಿ ನಿಟ್ಟಿನಲ್ಲಿ ಬೈಂದೂರುವಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಚರ್ಚೆಗಳು ನಡೆದಿದ್ದವು ಆದರೆ ಕಾರಣಾಂತರಗಳಿಂದ ಅದು ಆಗಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ನೋಡಬೇಕು ಎಂದರು.
ಉಡುಪಿ ಜಿಲ್ಲೆ ಆಗದೇ ಇರುತ್ತಿದ್ದರೆ ಅದು ಇಷ್ಟೊಂದು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿರಿಲ್ಲ. ಅದು ಒಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕಾಗಿ ಹಾಗೆ ಉಳಿಯುತ್ತಿತ್ತು ಅದರ ಅಭಿವೃದ್ದಿ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸುತ್ತಿರಲಿಲ್ಲವೇನೋ. ಆದ್ದರಿಂದ ಉಡುಪಿ ಜಿಲ್ಲೆಯಾಗಿ ಸ್ಥಾಪನೆ ಯಾಗಿ ಉತ್ತಮವಾಗಿದೆ ಜಿಲ್ಲೆಗೆ ಉತ್ತಮ ಅನುದಾನ ಬಂದಿದೆ. ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿದೆ ಎಂದರು. ಹಾಗೂ ಜಿಲ್ಲೆಯ ಟೆಂಪಲ್ ಟೂರಿಸಂ ಅಭಿವೃದ್ಧಿ ಆಗಿದೆ. ಶೈಕ್ಷಣಿಕ ಹಬ್ ಆಗಿ ಉಡುಪಿ ಬೆಳೆದಿದೆ. ಆದರೆ ಜಿಲ್ಲೆಯ ಕರಾವಳಿ ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿ ಅಗಬೇಕಿದೆ. ಜನರಿಗೆ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಸೇವೆ ಸಿಗುವಂತಹ ಪ್ರಯತ್ನ ಆಗಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉಡುಪಿ ಜಿಲ್ಲೆಯ ಮುಂದಿನ ಅಭಿವೃದ್ಧಿ ಯೋಜನೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ಹತ್ತು ವರ್ಷಕ್ಕೆ ಉದ್ಯೋಗ ಸೃಷ್ಟಿ, ವೈದ್ಯಕೀಯ ಕಾಲೇಜು, ಇರುವ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿಗಳ ನೇಮಕ ನಡೆಯಬೇಕು. ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಬಹಳ ಅಭಿವೃದ್ಧಿ ಹೊಂದಿದೆ ಆದರೆ ಜಿಲ್ಲೆಯ ಯುವ ಜನರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವುದು ಬಹಳ ಕಡಿಮೆಯಾಗಿದೆ. ಆದ್ದರಿಂದ ಜಿಲ್ಲೆಯ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವತ್ತ ಒಲವು ತೋರಬೇಕು ಎಂದು ಸಲಹೆ ನೀಡಿದರು.
ಕೋಮು ಗಲಭೆಗಳು ಅಭಿವೃದ್ಧಿಗೆ ಮಾರಕವಾಗಿದೆ ಇದರ ನಿಯಂತ್ರಣ ಯಾರಿಂದ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗಲಭೆಗಳಿಂದ ಜಿಲ್ಲೆಯ ಅಭಿವೃದ್ಧಿ ಕುಂಟಿತವಾಗುತ್ತದೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಆದಾಯ ಕಡಿಮೆ ಆಗುತ್ತದೆ. ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸಹಕಾರ ನೀಡಿದರೆ ಜಿಲ್ಲೆಯಲ್ಲಿ ಗಲಭೆ ಆಗುವುದನ್ನು ನಿಯಂತ್ರಿಸ ಬಹುದು ಎಂದರು.
ಸಂವಾದದಲ್ಲಿ ಜಿಲ್ಲಾ ಮೊದಲ ಜಿಲ್ಲಾಧಿಕಾರಿ ಕಲ್ಪನಾ ಗೋಪಾಲನ್ ಆನ್ಲೈನ್ ಮೂಲಕ ಭಾಗವಹಿಸಿ ಶುಭ ಹಾರೈಸಿದರು ಹಾಗೂ ಅವರು ಮಾತನಾಡಿ ಉಡುಪಿಯಲ್ಲಿ ಸೇವೆ ಸಲ್ಲಿಸಿದ್ದು ವಿಶೇಷವಾದದ್ದು, ಹೊಸ ಜಿಲ್ಲೆಯನ್ನು ಸೃಷ್ಟಿ ಮಾಡುವ ಜವಾಬ್ದಾರಿ, ಹಾಗೂ ಅಭಿವೃದ್ಧಿಗೆ ಸೇವೆ ಸಲ್ಲಿಸಲು ಸಿಕ್ಕ ಅವಕಾಶ ಉಡುಗೊರೆ ಎಂದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಿದ್ದೆವು. ಈ 25 ವರ್ಷಗಳಲ್ಲಿ ಉಡುಪಿ ಜಿಲ್ಲೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ವೇಗವಾಗಿ ಅಭೀವೃದ್ಧಿ ಹೊಂದಿದೆ. ಅಂದು ಅಂದುಕೊಂಡದಕ್ಕಿಂತ ಯೋಚನೆಗೂ ಮೀರಿ ಬೆಳೆದಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಮರೆಯಲಾಗದೆ ಅನುಭವ ಎಂದು ತಮ್ಮ ಸೇವೆಯ ದಿನಗಳ ಅನುಭವವನ್ನು ಹಂಚಿಕೊಂಡರು.
ಸಭೆಯಲ್ಲಿ 1997 ರಲ್ಲಿ ಜಿಲ್ಲೆ ರಚನೆಯಾದ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಜಿಲ್ಲೆಯ ರಜತಮಹೋತ್ಸವದ ಪೋಸ್ಟರ್ ಅನಾವರಣ ಗೊಳಿಸಿ, ರಜತ ಮಹೋತ್ಸವದ ಥೀಮ್ ಗೀತೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ನಜೀರ್ ಪೋಲ್ಯ,ಕಿರಣ್ ಮಂಜನಬೈಲ್, ಅರುಣ್ ಶಿರೂರು ಉಪಸ್ಥಿತರಿದ್ದರು. ರಹೀಂ ಉಜಿರೆ, ಸ್ವಾಗತಿಸಿ, ನಿರೂಪಿಸಿದರೆ, ಉಮೇಶ್ ಮಾರ್ಪಳ್ಳಿ ವಂದಿಸಿದರು.
.