ಎಸಿಬಿ ರದ್ದು- ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ
ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿರುವುದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಕಾಂತರಾಜು ಎಂಬುವರ ಪರವಾಗಿ ವಕೀಲ ಅಶೋಕ್ ಪಾಣಿಗ್ರಾಹಿ ಅವರು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಸಿ.ಟಿ.ರವಿಕುಮಾರ್ ಪೀಠದ ಎದುರು ಖಾಸಗಿ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
‘ಹಣಕ್ಕಾಗಿ ಬೇಡಿಕೆ ಸಲ್ಲಿಸಿದ ಬೆಸ್ಕಾಂನ ಇಬ್ಬರು ಅಧಿಕಾರಿಗಳ ವಿರುದ್ಧ ಎಸಿಬಿಯಲ್ಲಿ ದೂರು ಸಲ್ಲಿಸಿದ್ದರು. ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿರುವುದರಿಂದ ತನಿಖೆಗೆ ತೊಂದರೆ ಆಗಿದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ನೌಕರರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಗಳ ತನಿಖೆ ನಡೆಸಲು 2016ರಲ್ಲಿ ರಚಿಸಲಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು 2022ರ ಆಗಸ್ಟ್ 11ರಂದು (ಎಸಿಬಿ) ರದ್ದುಗೊಳಿಸಿದ್ದ ಹೈಕೋರ್ಟ್, ‘ಎಸಿಬಿ ವ್ಯಾಪ್ತಿಯಲ್ಲಿ ಸದ್ಯ ತನಿಖೆಗೆ ಒಳಪಟ್ಟಿರುವ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸಬೇಕು’ ಎಂದು ಮಹತ್ವದ ತೀರ್ಪು ನೀಡಿತ್ತು.
ರಾಜ್ಯ ಸರ್ಕಾರ 2016ರ ಮಾರ್ಚ್ 19ರಂದು ಎಸಿಬಿ ರಚನೆ ಮಾಡಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ, ಬೆಂಗಳೂರು ವಕೀಲರ ಸಂಘ ಮತ್ತು ವಕೀಲ ಬಿ.ಜಿ. ಚಿದಾನಂದ ಅರಸ್ ಸೇರಿದಂತೆ 15 ಜನರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರಕಟಿಸಿತ್ತು.
ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿರುವ ನ್ಯಾಯಪೀಠ, ’ಈಗಾಗಲೇ ಎಸಿಬಿ ಮುಂದೆ ಬಾಕಿ ಇರುವ ತನಿಖಾ, ವಿಚಾರಣಾ ಮತ್ತು ಶಿಸ್ತುಕ್ರಮದ ಅಡಿಯಲ್ಲಿನ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಬೇಕು’ ಎಂದು ಹೇಳಿತ್ತು.
ಆದಾಗ್ಯೂ, ಈತನಕ ಎಸಿಬಿಯು ತನಿಖೆ, ವಿಚಾರಣೆ ಮತ್ತು ಶಿಸ್ತುಕ್ರಮಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನೀಡಿರುವ ಶಿಕ್ಷೆ ಅಥವಾ ಬಿಡುಗಡೆಯ ಆದೇಶಗಳನ್ನು ಎಸಿಬಿ ಆದೇಶಕ್ಕೆ ಅನುಗುಣವಾಗಿ ಕಾಪಾಡಿಕೊಂಡು ಹೋಗತಕ್ಕದ್ದು ಮತ್ತು ಎಸಿಬಿ ಮುಂದಿದ್ದ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಈಗ ಅವು ಯಾವ ಹಂತದಲ್ಲಿವೆಯೋ ಅಲ್ಲಿಂದ ಮುಂದುವರಿಸಿಕೊಂಡು ಹೋಗಬೇಕು’ ಎಂದು ನಿರ್ದೇಶಿಸಿತ್ತು.
ದಂಡ ಪ್ರಕ್ರಿಯಾ ಸಂಹಿತೆ ಕಲಂ 2 (ಎಸ್) ಅಡಿಯಲ್ಲಿ 1991ರ ಫೆಬ್ರುವರಿ 6, 2002ರ ಮೇ 8 ಮತ್ತು 2002ರ ಡಿಸೆಂಬರ್ 5ರಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಅನುಸಾರ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ನೀಡಲಾಗಿರುವ ತನಿಖಾಧಿಕಾರವನ್ನು ಮರುಸ್ಥಾಪಿಸಿ ಆದೇಶಿಸಿತ್ತು.
‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ರ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಗಿದ್ದ ಅಧಿಕಾರವನ್ನು ಹಿಂಪಡೆದಿರುವ ಅಧಿಸೂಚನೆಯನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದ್ದು ಕರ್ನಾಟಕ ಲೋಕಾಯುಕ್ತ ಕಾಯ್ದೆ–1988ರ ಕಲಂ 12(4)ಕ್ಕೆ ತುರ್ತಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.