ಮಾಂಸಾಹಾರ ತಪ್ಪಾದರೆ, ಅವರ ಓಟು ಬೇಡ ಎಂದು ಬಿಜೆಪಿ ಹೇಳಲಿ- ದಿನೇಶ್ ಗುಂಡೂರಾವ್ ಸವಾಲು

ಬೆಂಗಳೂರು ಆ.23: ಮಾಂಸಹಾರ ತಿನ್ನುವುದು ತಪ್ಪಾದರೆ, ಮಾಂಸಹಾರಿಗಳು ನಮ್ಮ ಪಕ್ಷಕ್ಕೆ ಓಟು ಹಾಕುವುದು ಬೇಡ ಎಂದು ಬಿಜೆಪಿಯವರು ಹೇಳಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ತೆರಳಿದ್ದಾರೆ ಎಂಬ ಬಿಜೆಪಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ತಿರುಗೇಟು ನೀಡಿರುವ ಅವರು, ಸಿದ್ದರಾಮಯ್ಯ ಅವರನ್ನು ಕಂಡರೆ ಬಿಜೆಪಿಯವರಿಗೆ ನವರಂಧ್ರಗಳಲ್ಲೂ ನಡುಕ ಶುರುವಾಗುತ್ತದೆ. ಹಾಗಾಗಿ ಅವರು ಏನು ತಿನ್ನುತ್ತಾರೆ, ಏನು ಉಡುತ್ತಾರೆ ಎಂದು ವಿವಾದ ಸೃಷ್ಟಿಸಿ ರಾಜಕೀಯ ಮಾಡುತ್ತಿದ್ದಾರೆ. ಮಾಂಸಹಾರ ತಿನ್ನುವುದು ತಪ್ಪಾದರೆ, ಮಾಂಸಹಾರಿಗಳು ನಮ್ಮ ಪಕ್ಷಕ್ಕೆ ಓಟು ಹಾಕುವುದು ಬೇಡ ಎಂದು ಬಿಜೆಪಿಯವರು ಹೇಳಲಿ ಹೀಗೆ ಹೇಳುವ ತಾಕತ್ತು ಬಿಜೆಪಿಯವರಿಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಮಾಂಸಹಾರ ಸೇವನೆಗೆ ಸಂಬಂಧಿಸಿದಂತೆ ಬಿಜೆಪಿಯವರು ಕೀಳು ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಾಗಲಿ ಅಥವಾ ಇನ್ಯಾರೆ ಆಗಿರಲಿ ಏನನ್ನು ತಿನ್ನಬೇಕು..? ಏನನ್ನು ತಿನ್ನಬಾರದು ಎಂದು ಬಿಜೆಪಿಯವರು ನಿರ್ಧರಿಸಬೇಕೆ…? ನಮ್ಮ ಆಹಾರ, ನಮ್ಮ ಹಕ್ಕು. ಇದನ್ನು ಕೇಳಲು ಬಿಜೆಪಿಯವರಿಗೆ ಅಧಿಕಾರ ಕೊಟ್ಟವರ್ಯಾರು…? ಊಟ ತನ್ನಿಚ್ಛೆ., ನೋಟ ಪರರಿಚ್ಛೆ ಅಲ್ಲವೇ.? ಎಂದಿದ್ದಾರೆ.

ಹಾಗೂ ಚಿಕ್ಕಮಗಳೂರು, ಕೊಡಗು ಮತ್ತು ಹಾಸನದ ಸಕಲೇಶಪುರದಲ್ಲಿ ಮದುವೆಯ ದಿನವೇ ಮಾಂಸಹಾರ ಮಾಡುತ್ತಾರೆ. ಅದು ಅವರ ಆಹಾರ ಪದ್ದತಿ. ಇನ್ನು ಮಲೆನಾಡಿನ ಕೆಲವು ಕಡೆ ಎಲ್ಲಾ ಹಬ್ಬಗಳಿಗೂ ಮಾಂಸಹಾರ ಮಾಡುತ್ತಾರೆ. ಸಿ.ಟಿ.ರವಿ ಮತ್ತು ಪ್ರತಾಪ ಸಿಂಹ ಮಲೆನಾಡಿನವರು. ಗಣೇಶನ ಹಬ್ಬದ ದಿವಸ ಅವರ ಭಾಗದಲ್ಲಿ ಮಾಂಸಹಾರ ಮಾಡುವುದನ್ನು ಅವರು ನಿರಾಕರಿಸುತ್ತಾರೆಯೇ….? ಎಂದು ಪ್ರಶ್ನಿಸಿದ್ದಾರೆ.

ಬೇಡರ ಕಣ್ಣಪ್ಪ ಶಿವಲಿಂಗಕ್ಕೆ ಮಾಂಸದ ನೈವೇದ್ಯ ಇಟ್ಟ. ಶಿವ ಕಣ್ಣಪ್ಪನಿಗೆ ಒಲಿಯಲಿಲ್ಲವೆ…? ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗ-ಶುದ್ಧಿ, ಇದೇ ಬಹಿರಂಗ-ಶುದ್ಧಿ, ಇದೇ ಕೂಡಲಸಂಗಮನೊಲಿಸುವ ಪರಿ! ಎಂದಿದ್ದಾರೆ ಬಸವಣ್ಣ. ಯಾವುದೇ ಕೆಲಸಕ್ಕೂ ಭಕ್ತಿ ಶುದ್ಧವಾಗಿರಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!