ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು: ಅಧ್ಯಕ್ಷ ಹುದ್ದೆಯಿಂದ ಬಿಡುಗಡೆಗೆ ಸೋನಿಯಾ ಮನವಿ
ನವದೆಹಲಿ: ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸುವಂತೆ ಸೋನಿಯಾ ಗಾಂಧಿ ಅವರು ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ (ಸಿಡಬ್ಲ್ಯುಸಿ) ಮನವಿ ಮಾಡಿದ್ದಾರೆ. ಆದರೆ, ಅಧ್ಯಕ್ಷ ಹುದ್ದೆಯಲ್ಲಿ ಸೋನಿಯಾ ಅವರೇ ಮುಂದುವರಿಯಬೇಕು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಒತ್ತಾಯಿಸಿದ್ದಾರೆ.
ಆದರೆ, ಅದಕ್ಕೊಪ್ಪದ ಸೋನಿಯಾ ಗಾಂಧಿ, ಪಕ್ಷದ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕರೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಧ್ಯಕ್ಷೆ ಹುದ್ದೆ ತ್ಯಜಿಸುವ ಪ್ರಸ್ತಾವ ಮಂಡಿಸುವ ಮುನ್ನ ಸೋನಿಯಾ ಅವರು ಗುಲಾಂ ನಬಿ ಆಜಾದ್ ಮತ್ತು ಇತರರ ಪತ್ರವನ್ನು ಉಲ್ಲೇಖಿಸಿದ್ದಾರೆ. ಭಿನ್ನಮತೀಯರು ಕಳುಹಿಸಿದ ಟಿಪ್ಪಣಿಗೆ ಉತ್ತರಿಸಿರುವ ಸೋನಿಯಾ, ಬಳಿಕ ಕೆ.ಸಿ.ವೇಣುಗೋಪಾಲ್ ಅವರಿಗೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಅದರಲ್ಲಿರುವ ವಿಷಯಗಳನ್ನು ಓದಲಾಗಿದೆ ಎಂದೂ ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಅಸಮಾಧಾನ: ಕೆಲವು ನಾಯಕರು ಪತ್ರ ಬರೆದಿರುವುದನ್ನು ಟೀಕಿಸಿದ ರಾಹುಲ್ ಗಾಂಧಿ, ಪತ್ರ ಬರೆದಿರುವ ಸಂದರ್ಭವನ್ನು ಪ್ರಶ್ನಿಸಿದ್ದಾರೆ. ಜತೆಗೆ, ಪಕ್ಷದ ಆಂತರಿಕ ವಿಷಯವನ್ನು ಬಹಿರಂಗಪಡಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕಾರ್ಯಕಾರಿ ಸಮಿತಿ ಸಭೆ ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡಿತ್ತು. ಮನಮೋಹನ್ ಸಿಂಗ್, ಪ್ರಿಯಾಂಕಾ ಗಾಂಧಿ ವಾದ್ರಾ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ಪಕ್ಷದ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಇಂದಿನ ಸಭೆಯ ಹೈಲೈಟ್: -ನಾನು ಅಧ್ಯಕ್ಷೆಯಾಗಿ ಮುಂದುವರಿಯುವುದಿಲ್ಲ, ಹೊಸ ನಾಯಕರನ್ನು ಹುಡುಕಿ ನೇಮಕ ಮಾಡಿ.
-20ಕ್ಕೂ ಹೆಚ್ಚು ನಾಯಕರು ಕೆಲ ದಿನಗಳ ಹಿಂದೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ಬಲಿಷ್ಠ ನಾಯಕತ್ವ ಬೇಕು, ಕಾಂಗ್ರೆಸ್ ನ ಕಾರ್ಯವೈಖರಿಯಲ್ಲಿ ಬದಲಾವಣೆಯಾಗಬೇಕು ಎಂದು ಒತ್ತಾಯಿಸಿ ಬರೆದ ಪತ್ರದ ಬಗ್ಗೆ ಚರ್ಚೆ.
– ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಧ್ಯೆ ಪ್ರವೇಶಿಸಿ ಸೋನಿಯಾ ಗಾಂಧಿಯವರು ಆಸ್ಪತ್ರೆಯಲ್ಲಿ ದಾಖಲಾಗಿರುವಾಗ, ರಾಜಸ್ತಾನ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದ ಸಂದರ್ಭದಲ್ಲಿ ಪತ್ರ ಬರೆಯುವ ಅಗತ್ಯವೇನಿತ್ತು, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ಆಕ್ಷೇಪ.
-ತಮ್ಮದೇನಿದ್ದರೂ ಕಾಂಗ್ರೆಸ್ ಪಕ್ಷದ ಮೇಲೆ ನಿಷ್ಠಾವಂತಿಕೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ ಗುಲಾಂ ನಬಿ ಆಜಾದ್.
-ಕಳೆದ ಆಗಸ್ಟ್ 7ರಂದು ಹಿರಿಯ ನಾಯಕರು ಬರೆದಿದ್ದ ಪತ್ರಕ್ಕೆ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಎ ಕೆ ಆಂಟನಿ ಸೇರಿ ಹಲವರಿಂದ ಅಸಮಾಧಾನ.
-ನಾಯಕತ್ವದಲ್ಲಿನ ಅನಿಶ್ಚಿತತೆ, ಪಕ್ಷದಲ್ಲಿನ ಭಿನ್ನಮತದಿಂದಾಗಿ ಕಾರ್ಯಕರ್ತರಲ್ಲಿ ನೈತಿಕತೆ ಕುಗ್ಗಿದ್ದು ಪಕ್ಷವನ್ನು ದುರ್ಬಲಗೊಳಿಸಿದೆ ಎಂದು ಹೇಳಿ ಪತ್ರ ಬರೆದಿದ್ದು ಗುಲಾಂ ನಬಿ ಆಜಾದ್, ಶಶಿ ತರೂರ್, ಕಪಿಲ್ ಸಿಬಲ್, ಪೃಥ್ವಿರಾಜ್ ಚೌಹಾಣ್, ವಿವೇಕ್ ಟಂಖಾ ಮತ್ತು ಆನಂದ್ ಶರ್ಮಾ ಸೇರಿ ಹಲವರಿಂದ ಪತ್ರ.
ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲು ಕಂಡ ನಂತರ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಳೆದ ಜುಲೈಯಲ್ಲಿ ರಾಜೀನಾಮೆ ನೀಡಿದ್ದರು. ನಂತರ ಸೋನಿಯಾ ಗಾಂಧಿಯವರು ಹಂಗಾಮಿ ಅಧ್ಯಕ್ಷೆಯಾಗಿ ನೇಮಕಗೊಂಡರು.