ಉಡುಪಿ: ರಕ್ಷಾ ಸಾವಿನ ತನಿಖಾ ವರದಿ ನೀಡುವಂತೆ ಜಿಲ್ಲಾಧಿಕಾರಿ ಆದೇಶ
ಉಡುಪಿ: (ಉಡುಪಿ ಟೈಮ್ಸ್ ವರದಿ) ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಬಲಿಯಾದ ಇಂದಿರಾನಗರದ ರಕ್ಷಾ (26) ಸಾವಿನ ಕುರಿತಂತೆ ಸೂಕ್ತ ತನಿಖೆ ನಡೆಸಿ ನಾಲ್ಕು ದಿನದಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.
ಈ ಕುರಿತಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಸುಧೀರ್ ಚಂದ್ರ ಸೂಡ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ನಾಲ್ಕು ದಿನದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಆ.21 ರಂದು ತಲೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ ರಕ್ಷಾ ಅವರನ್ನು ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರು ಮಹಿಳೆಗೆ ಚುಚ್ಚುಮದ್ದು ನೀಡಿ ಮನೆಗೆ ಕಳುಹಿಸಿದ್ದರು. ನಂತರ ಮನೆಯಲ್ಲಿ ರಕ್ಷಾ ಮೃತ ಪಟ್ಟಿದ್ದರು.
ಸಾವಿನ ಬಗ್ಗೆ ಸಂಶಯಗೊಂಡ ಪತಿ ಖಾಸಗಿ ಆಸ್ಪತ್ರೆಯ ವಿರುದ್ದ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಮೃತ ಮಹಿಳೆಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಅದರ ವರದಿಯಲ್ಲಿ ಆ.22 ರಂದು ಪಾಸಿಟಿವ್ ಬಂದಿತ್ತು. ಈ ಎಲ್ಲಾ ಬೆಳವಣಿಗೆಯಲ್ಲಿ ಸಂಶಯಗೊಂಡ ಮೃತ ಮಹಿಳೆಯ ಕುಟುಂಬಿಕರು ಮತ್ತು ನಾಗರಿಕರು ಜಿಲ್ಲಾಸ್ಪತ್ರೆಯ ಶವಗಾರದ ಎದುರು ಪ್ರತಿಭಟನೆ ನಡೆಸಿದ್ದರು.