ಹೆಬ್ರಿ: ದೇಣಿಗೆ ಸಂಗ್ರಹಿಸಿ ಸೂರಿನ‌ ಭಾಗ್ಯ ಕಲ್ಪಸಿದ ನಕ್ಸಲ್ ನಿಗ್ರಹ ಪಡೆಯ ತಂಡ

ಹೆಬ್ರಿ ಆ.13: ಸುಮಾರು 50 ವರ್ಷಗಳಿಂದ ವಾಸಿಸಲು ಸೂಕ್ತವಾದ ಸೂರಿಲ್ಲಿದೆ ಗುಡಿಸಲಲ್ಲಿ ವಾಸಿಸುತ್ತಿದ್ದ ಹೆಬ್ರಿಯ ನಡ್ಪಾಲು ಗ್ರಾಮದ ನಾರಾಯಣ ಗೌಡ ಅವರಿಗೆ ಇಲ್ಲಿನ ನಕ್ಸಲ್ ನಿಗ್ರಹ ಪಡೆಯ ತಂಡ ವ್ಯವಸ್ಥಿತವಾದ ಮನೆ ನಿರ್ಮಿಸಿಕೊಟ್ಟಿದೆ.

ಕೇವಲ ನಾಲ್ಕು ದಿನಗಳಲ್ಲಿ ನಕ್ಸಲ್ ವಿಗ್ರಹ ಪಡೆಯ ಸಿಬ್ಬಂದಿಗಳು ಸುಮಾರು 55,000 ರೂಪಾಯಿ ದೇಣಿಗೆ ಸಂಗ್ರಹಿಸಿದ್ದು ಮಾತ್ರವಲ್ಲದೆ ಸ್ವತಹ ಅವರೇ ಶ್ರಮದಾನ ನೀಡುವ ಮೂಲಕ ಮನೆ ನಿರ್ಮಿಸಿ ಕೊಟ್ಟಿದ್ದು ಇದೀಗ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ನೆನಪಿಗಾಗಿ ನಿರ್ಮಿಸಿದ ಈ ಮನೆಗೆ ಅಮೃತ ನಿವಾಸ ಎಂದು ಹೆಸರಿಡಲಾಗಿದೆ.

ಆ.11 ರಂದು ಎಎನ್‍ಎಫ್ ಅಧೀಕ್ಷಕ ಪ್ರಕಾಶ್ ಅವರು ನಾರಾಯಣ ಗೌಡ ಅವರಿಗೆ ಹೊಸ ಬಟ್ಟೆ ನೀಡುವ ಮೂಲಕ ಮನೆಯನ್ನು ಹಸ್ತಾಂತರಿಸಿದರು. ಈ ವೇಳೆ ಮನೆ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಸ್ಥಳೀಯರಿಗೆ ಕೂಡಾ ಹೊಸ ವಸ್ತ್ರ ನೀಡಲಾಯಿತು. ಅಲ್ಲದೆ ಮನೆ ಮನೆಯಲ್ಲಿ ತಿರಂಗಾ ಕಾರ್ಯಕ್ರಮದ ಅಂಗವಾಗಿ ಧ್ವಜವನ್ನ ನೀಡಿ ಮನೆಯಲ್ಲಿಹಾರಿಸುವಂತೆ ತಂಡದವರು ಮನೆಯವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಹೆಬ್ರಿಯ ಠಾಣಾಧಿಕಾರಿ ಸುದರ್ಶನ್ ದೊಡ್ಮನಿ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮನೆ ಇಲ್ಲದೆ ಕಷ್ಟಪಡುತ್ತಿದ್ದ 73 ವರ್ಷದ ನಾರಾಯಣ ಗೌಡ ಅವರ ಕಷ್ಟವನ್ನು ಅರಿತ ನಕ್ಸಲ್ ನಿಗ್ರಹ ತಂಡವು, ತಂಡದ ಮುಖ್ಯಸ್ಥ ಸತೀಶ್ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ಮತ್ತು ಗಣಪತಿ ಅವರು ತಮ್ಮ ತಂಡದೊಂದಿಗೆ ಮನೆಗೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸಿ ಮಾನವಿಯತೆ ಮರೆತಿದ್ದಾರೆ. ಇವರು ಮನೆ ನಿರ್ಮಿಸಿ ಕೊಟ್ಟಿದ್ದು ಮಾತ್ರವಲ್ಲದೆ ಮನೆಗೆ ಬೇಕಾದ ಎಲ್ಲಾ ಪರಿಕರಗಳನ್ನು ಕೂಡ ಒದಗಿಸಿದ್ದಾರೆ.

ಹಾಗೂ  ನಡ್ಪಾಲು ಗ್ರಾಮದ ಗ್ರಾಮೀಣ ಪ್ರದೇಶವಾದ ತೆಂಕಮಾರಿಗೆ ತೆರಳಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಎಎನ್‍ಎಫ್ ನ ತಂಡ ನಾರಾಯಣ ಗೌಡ ಅವರ ಮನೆಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ಸುಮಾರು 2 ಕಿ.ಮೀ ಗಳಷ್ಟು ದೂರ ತಲೆಹೊರೆಯಲ್ಲಿ ಹೊತ್ತುಕೊಂಡು ಸಾಗಬೇಕಾಯಿತು.

ಇದೀಗ ನಕ್ಸಲ್ ನಿಗ್ರಹ ಪಡೆಯ ತಂಡದ ಈ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಎಎನ್‍ಎಫ್ ಅಧೀಕ್ಷಕ ಪ್ರಕಾಶ್ ಅವರು ಎಎನ್‍ಎಫ್ ತಂಡಕ್ಕೆ 20,000 ರೂ ಬಹುಮಾನ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!