ಉಡುಪಿ: ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಬಿಜೆಪಿ ಮುಖಂಡನ ಪತ್ನಿ ಮೃತ್ಯು?
ಉಡುಪಿ : (ಉಡುಪಿ ಟೈಮ್ಸ್ ವರದಿ) ಕಳೆದ ಎರಡು ದಿನಗಳ ಹಿಂದೆ ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಖಾಸಗಿ ಆಸ್ಪತ್ರೆಯ ವೈದ್ಯರು ನೀಡಿದ ಚುಚ್ಚುಮದ್ದಿನಿಂದ ಮೃತ ಪಟ್ಟಿರುವುದಾಗಿ, ಮೃತರ ಪತಿ ನಗರ ಠಾಣೆಗೆ ದೂರು ನೀಡಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಉಡುಪಿ ಬಿಜೆಪಿ ನಗರ ಮೋರ್ಚಾ ಉಪಾಧ್ಯಕ್ಷ, ಇಂದಿರಾನಗರ ನಿವಾಸಿ ಶಿವಪ್ರಸಾದ್ ಯಾನೆ ಪಚ್ಚು ಅವರ ಪತ್ನಿ ಶ್ರೀರಕ್ಷಾ (26) ಕಳೆದ ಎರಡು ದಿನದಿಂದ ತಲೆನೋವಿನಿಂದ ಬಳಲುತ್ತಿದ್ದರು.
ಗುರುವಾರ ರಾತ್ರಿ ತಲೆ ನೋವು , ವಿಪರೀತ ವಾಂತಿಯಿಂದಾಗಿ ಬಳಲುತ್ತಿದ ಇವರು ಶುಕ್ರವಾರ ಮುಂಜಾನೆ ಮನೆಯಲ್ಲಿ ತಲೆ ತಿರುಗಿ ಬಿದ್ದಿದ್ದರು.
ತಕ್ಷಣ ಅವರು ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿನ ವೈದ್ಯರು ಯಾವುದೋ ಚುಚ್ಚುಮದ್ದು ನೀಡಿ ಗುಣಮುಖರಾಗುತ್ತಾರೆಂದು ಶ್ರೀರಕ್ಷಾ ಅವರನ್ನು ಮನೆಗೆ ಕಳುಹಿಸಿದ್ದರು.
ನಂತರ ಮನೆಗೆ ಹೋಗಿ ಮಲಗಿದ್ದ ಇವರ ಬಾಯಿಯಲ್ಲಿ ನೊರೆ ಬರುವುದನ್ನು ಕಂಡ ಮನೆಯವರು ತಕ್ಷಣ ಉಡುಪಿ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭ ಆದಾಗಲೇ ಶ್ರೀರಕ್ಷಾ ಮೃತ ಪಟ್ಟಿದ್ದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಶ್ರೀರಕ್ಷಾ ಅವರಿಗೆ ಎರಡು ವರ್ಷದ ಮತ್ತು ಒಂದು ವರ್ಷದ ಗಂಡು ಮಕ್ಕಳಿದ್ದಾರೆ.
ಪತ್ನಿ ಸಾವಿನಲ್ಲಿ ಸಂಶಯವಿದೆಂದು ಪತಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹ ಉಡುಪಿಯ ಜಿಲ್ಲಾಸ್ಪತ್ರೆಯ ಶವಗಾರದಲ್ಲಿದ್ದು, ನಾಳೆ ಶವ ಪರೀಕ್ಷೆ ನಡೆಯಲಿದೆ.