ಖಾಸಗಿ ಬಸ್ ಗಳಲ್ಲಿ ಜಿಪಿಎಸ್ ಅಳವಡಿಸದಿದ್ದರೆ ಪರ್ಮೀಟ್ ರದ್ದು: ಜಿಲ್ಲಾಧಿಕಾರಿ
ಮಂಗಳೂರು:(ಉಡುಪಿ ಟೈಮ್ಸ್ ವರದಿ) ಸ್ಮಾರ್ಟ್‍ಸಿಟಿ ಯೋಜನೆಯಡಿ ಏಕೀಕೃತ ಸಾರಿಗೆ ವ್ಯವಸ್ಥೆಗೆ ಕಮಾಂಡ್ ಕಂಟ್ರೋಲ್ ರೂಂ ತೆರೆಯಲಾಗಿದೆ. ಇದರಿಂದ ನಗರದಲ್ಲಿ ಸಂಚರಿಸುವ ವಾಹನಗಳ ಸಂಚಾರ ನಿರ್ವಹಣೆ ಟ್ರಾಕಿಂಗ್ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಸಂಚರಿಸುತ್ತಿರುವ ಖಾಸಗೀ ಬಸ್‍ಗಳಲ್ಲಿ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಲು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದ ದ.ಕ. ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಸೂಚಿಸಿದರು.
ಸಾರ್ವಜನಿಕರ ಸುರಕ್ಷತೆ ಹಾಗೂ ನಗರದ ಸಂಚಾರ ನಿರ್ವಹಣೆ ಉತ್ತಮಪಡಿಸಲು ಖಾಸಗೀ ಬಸ್‍ಗಳಲ್ಲಿ ಜಿಪಿಎಸ್ ಅಳವಡಿಸುವುದು ಅಗತ್ಯವಾಗಿದೆ. ಈಗಾಗಲೇ ಕೆಲವು ಬಸ್‍ಗಳಲ್ಲಿ ಅಳವಡಿಸಿರುವ ಜಿಪಿಎಸ್ ಅನ್ನು ತೆಗೆದುಹಾಕಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಖಾಸಗೀ ಬಸ್‍ಗಳು ಜಿಪಿಎಸ್ ಅಳವಡಿಸದಿದ್ದರೆ, ಅಂತಹ ಬಸ್‍ಗಳ ಪರ್ಮೀಟ್ ರದ್ದುಪಡಿಸಲು ಆರ್‍ಟಿಎಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಎಚ್ಚರಿಸಿದರು. ಸಭೆಯಲ್ಲಿ ಮಂಗಳೂರು ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಅವರು ಸ್ಮಾರ್ಟ್‍ಸಿಟಿ ಕಾಮಗಾರಿಗಳ ಮಾಹಿತಿ ನೀಡಿದರು. ಮಹಾನಗರಪಾಲಿಕೆ ಆಯುಕ್ತ ದಿನೇಶ್ ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಮದನ್, ಡಿಸಿಪಿ ವಿನಯ್ ಗಾಂವ್ಕರ್ ಮತ್ತಿತರರು ಸಭೆಯಲ್ಲಿ ಇದ್ದರು.