ತಪ್ಪು ಮಾಡದ ವ್ಯಕ್ತಿಯ ಬಂಧನ- 5 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು, ಆ.6: ಪ್ರಕರಣವೊಂದಕ್ಕೆ ಸಂಬಂಧಿಸಿ ತಪ್ಪು ಮಾಡದ ವ್ಯಕ್ತಿಯನ್ನು ಬಂಧಿಸಿದ ಕಾರಣಕ್ಕಾಗಿ ಬಂಧಿತ ವ್ಯಕ್ತಿಗೆ ರಾಜ್ಯ ಸರಕಾರವು 5 ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ.
ಪ್ರಕರಣವೊಂದರ ತನಿಖೆಗೆ ಸಂಬಂಧಿಸಿ ತಮ್ಮನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ‘ಇಂಡಿಯಾ ಹಾಲಿಡೇ ಪ್ರೈ.ಲಿ.’ ಸಂಸ್ಥೆಯ ಅಧಿಕಾರಿ ಎನ್.ನಿಂಗರಾಜ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಬಂಧಿತ ವ್ಯಕ್ತಿಗೆ ರಾಜ್ಯ ಸರಕಾರವು 5 ಲಕ್ಷ ರೂ. ಪರಿಹಾರ ನೀಡಬೇಕು. ಇದಕ್ಕಾಗಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಯಿಂದ ಈ ಹಣವನ್ನು ಸರಕಾರ ಭರಿಸಿ ಕೊಳ್ಳಬಹುದು ಎಂದು ಸೂಚಿಸಿದೆ.ಹಾಗೂ ಜಾಮೀನು ಅಥವಾ ಜಾಮೀನು ರಹಿತವಾಗಿದ್ದರೂ ಯಾವುದೇ ಪ್ರಕರಣದಡಿ ವಾರಂಟ್ ಸಹಿತ ಆರೋಪಿಯನ್ನು ಬಂಧಿಸುವಾಗ ಆ ವ್ಯಕ್ತಿಯ ಸರಿಯಾದ ಗುರುತನ್ನು ಪತ್ತೆ ಹಚ್ಚಿ ದಾಖಲೆಗಳನ್ನು ಪರಿಶೀಲಿಸಬೇಕು. ಜತೆಗೆ ಬಂಧಿಸಬಹುದಾದ ವ್ಯಕ್ತಿ ಇವರೇ ಎಂದು ಸಾಧ್ಯವಿದ್ದ ಎಲ್ಲ ಮೂಲಗಳಿಂದ ಖಚಿತಪಡಿಸಿಕೊಂಡ ನಂತರವೇ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಬೇಕು ಎಂದು ನಿರ್ದೇಶನ ನೀಡಿದೆ.
ಇದೇ ವೇಳೆ ವ್ಯಕ್ತಿಯನ್ನು ಬಂಧಿಸುವಾಗಿನ ನಿಯಮ ಗಳನ್ನು ಪಾಲಿಸುವ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆಯೇ ಎಂಬುವ ಬಗ್ಗೆ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆಯೂ ನ್ಯಾಯಪೀಠವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ.