ಆದಾಯ ತೆರಿಗೆ ಕಛೇರಿ ಸ್ಥಳಾಂತರವಾಗದಂತೆ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲಿ: ಕಾಂಗ್ರೆಸ್
ಉಡುಪಿ: ಮಂಗಳೂರಿನಲ್ಲಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿದ್ದ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಛೇರಿಯನ್ನು ಗೋವಾದ ಪಣಜಿಯ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಛೇರಿಯಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಕರಾವಳಿ ತೆರಿಗೆ ಪಾವತಿದಾರರಿಗೆ ಅನ್ಯಾಯ ಮಾಡಿದಂತೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಕೈಗಾರಿಕಾ ಕೇಂದ್ರಿತ ನಗರವಾದ ಮಂಗಳೂರು ನಗರವು ಕರ್ನಾಟಕ ರಾಜ್ಯದ ಎರಡನೇ ಅತೀ ದೊಡ್ಡ ನಗರವಾಗಿದ್ದು ಪ್ರಮುಖ ವಾಣಿಜ್ಯ ನಗರವಾಗಿ ಬೆಳೆಯುತ್ತಿದೆ. ಮಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು 5 ಲಕ್ಷ ಮಂದಿ ತೆರಿಗೆ ಪಾವತಿದಾರರಿದ್ದಾರೆ ಹಾಗೂ ವಾರ್ಷಿಕ 3300 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿಯೇ ಎರಡನೇ ಅತೀ ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಕಛೇರಿ ಎನ್ನುವ ಹೆಗ್ಗಳಿಕೆಯೊಂದಿಗೆ ಉದ್ದಿಮೆಗಳು, ವ್ಯಾಪಾರ ಕೇಂದ್ರಗಳು, ಹಣಕಾಸು ವ್ಯವಹಾರ ನಡೆಸುವ ಸಂಸ್ಥೆಗಳು, ಮೀನುಗಾರಿಕಾ ಬಂದರು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಅಂತರಾಷ್ಟ್ರೀಯ ಖ್ಯಾತಿಯ ಶೈಕ್ಷಣಿಕ ಸಂಸ್ಥೆಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ಮಡಿಕೇರಿಯಿಂದ ಹಿಡಿದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯವರೆಗೆ ಕಾರ್ಯವ್ಯಾಪ್ತಿಯನ್ನು ಹೊಂದಿದ ಮಂಗಳೂರು ಆದಾಯ ಕಛೇರಿಯನ್ನು ಗೋವಾದ ಕಛೇರಿಯೊಂದಿಗೆ ವಿಲೀನಗೊಳಿಸುವ ಕೇಂದ್ರದ ನಿರ್ಧಾರ ಕರಾವಳಿ ಭಾಗದ ತೆರಿಗೆದಾರರಿಗೆ ಆಘಾತ ತರುವ ಬೆಳವಣಿಗೆಯಾಗಿದೆ.
ಹುಬ್ಬಳಿ ಕಛೇರಿಯನ್ನು ಕೂಡಾ ಗೋವಾಕ್ಕೆ ಸ್ಥಳಾಂತರಿಸಲು ನಿರ್ಧರಿಸಿದಾಗ ಹುಬ್ಬಳ್ಳಿಯ ಜನಪ್ರತಿನಿಧಿಗಳು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಆದೇಶವನ್ನು ರದ್ದು ಪಡಿಸಲು ಸಫಲರಾಗಿರುವುದು ನಮಗೆ ನಿದರ್ಶನವಿರುವಾಗ ಹುಬ್ಬಳ್ಳಿಗಿಂತಲೂ ಇಮ್ಮಡಿ ಸಂಖ್ಯೆಯ ತೆರಿಗೆದಾರರು ಮಂಗಳೂರು ವಲಯದಲ್ಲಿದ್ದಾರೆ. ಹಾಗಾಗಿ ಮಂಗಳೂರು ಕಚೇರಿ ಉಳಿಯುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಹಿನ್ನಲೆಯಲ್ಲಿ ಕರಾವಳಿಯ ಜನಪ್ರತಿನಿಧಿಗಳು ಕೇಂದ್ರದ ವಿತ್ತ ಸಚಿವಾಲಯದ ಮೇಲೆ ಒತ್ತಡ ಹೇರಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಛೇರಿಯನ್ನು ಮಂಗಳೂರಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಆಗ್ರಹಿಸಿದ್ದಾರೆ.