ಬಂಟಕಲ್ಲು- ಕೊಂಕಣಿ ಮಾನ್ಯತಾ ದಿನಾಚರಣೆ
ಬಂಟಕಲ್ಲು: (ಉಡುಪಿ ಟೈಮ್ಸ್ ವರದಿ) : ಕೊಂಕಣಿ ಬಾಷೆಯನ್ನು 1992 ರ ಅಗೋಷ್ಟ್ 20 ರಂದು ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರಿಸಲಾಯಿತು. ಕೊಂಕಣಿ ಬಾಷೆಗೆ ಸಂವಿಧಾನಿಕ ಸ್ಥಾನ ಮಾನ ಸಿಕ್ಕಿದ ಈ ದಿನವನ್ನು ಕೊಂಕಣಿ ಮಾನ್ಯತಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಬಂಟಕಲ್ಲು ದೇವಸ್ಥಾನದ ವಠಾರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶೈಕ್ಷಣಿಕ, ತಾಂತ್ರಿಕ, ಸಾಮಾಜಿಕವಾಗಿ ಸೇವೆ ನೀಡುತ್ತಿರುವ ಕಟಪಾಡಿ ಸತ್ಯೇಂದ್ರ ಪೈ ಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೊಂಕಣಿ ಬಾಷೆಯ ವಿಶೇಷತೆ ಬಗ್ಗೆ ತಿಳಿಸಿ, ನಮ್ಮ ಬಾಷೆಯ ಬಗ್ಗೆ ಅಭಿಮಾನ ಹೊಂದಿ ಬಾಷೆಯ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು. ಕೊಂಕಣಿ ಬಾಷೆಯ ಇತಿಹಾಸವನ್ನು ಎಲ್ಲರೂ ತಿಳಿಯುವಂತಾಗಬೇಕು.ಇದರ ಇತಿಹಾಸವನ್ನು ದಾಖಲಿಸಿಕೊಳ್ಳುವ ಕಾರ್ಯ ಆಗಲಿ ಎಂದರು. ಚಲನ ಚಿತ್ರ, ಅಥವಾ ಧಾರವಾಹಿಯ ಮೂಲಕ ಇತಿಹಾಸ ದಾಖಲಿಸುವಂತಾಗಲಿ ಎಂದರು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೀತಿ ನಾವೆಲ್ಕರ್ ಬಂಟಕಲ್ಲು ಇವರಿಗೆ ಕೊಂಕಣಿ ಮಾನ್ಯತಾ ದಿವಸ್ ನ ಗೌರವ ಪ್ರಧಾನ ಮಾಡಲಾಯಿತು. ಇವರನ್ನು ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಜಯರಾಮ ಪ್ರಭು ಗಂಪದಬೈಲು ಶಾಲು ಹೊದಿಸಿ ಸನ್ಮಾನಿಸಿದರು. ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಈ ಕಾರ್ಯಕ್ರಮವು ಪ್ರತೀವರ್ಷ ನಡೆಯುವಂತಾಗಲಿ ಎಂದು ಹಾರೈಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರೂ , ಮಂಗಳೂರು ವಿ.ವಿಯ ಕೊಂಕಣಿ ಅಧ್ಯಾಯನ ಪೀಠದ ಸದಸ್ಯರು ಆಗಿರುವ ಪುಂಡಲೀಕ ಮರಾಠೆಯವರು ಪ್ರದಾನ ಬಾಷಣ ಮಾಡಿದರು. ಕೊಂಕಣಿ ಮಾನ್ಯತಾ ದಿವಸದ ಮಹತ್ವ, ಅಕಾಡಮಿಯಿಂದ ಸಿಗುವ ಸಹಾಯಗಳು, ಬಾಷೆ ನಡೆದು ಬಂದ ದಾರಿ ಹಾಗೂ ಅಕಾಡೆಮಿ ಯ ವಿಚಾರಗಳನ್ನು ತಿಳಿಸಿದರು.
ಕಾರ್ಯಕ್ರದಲ್ಲಿ ಸಮಾಜ ಸೇವಕ, ಬರಹಗಾರ ರಾಘವೇಂದ್ರ ಪ್ರಭು ಕರ್ವಾಲು, ಶಿರ್ವ ಸಂತ ಮೇರಿ ಕಾಲೇಜಿನ ಉಪನ್ಯಾಸಕ ವಿಠಲ ನಾಯಕ್, ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ್ ಪ್ರಭು, ಯುವ ವೃಂದದ ಸದಸ್ಯರು, ಸಮಾಜ ಭಾಂಧವರು ಉಪಸ್ಥಿತರಿದ್ದರು.
ಯುವ ವೃಂದದ ಗೌರವಾಧ್ಯಕ್ಷ ಕೆ ಆರ್ ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನು ಸ್ವಾಗತಿಸಿದರು. ಯುವ ವೃಂದದ ಅಧ್ಯಕ್ಷ ವಿಶ್ವನಾಥ ಬಾಂದೇಲ್ಕರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆಶಿಷ್ ಪಾಟ್ಕರ್ ಧನ್ಯವಾದ ನೀಡಿದರು. ಕುಮಾರಿ ರಚಿತಾ ಪಾಟ್ಕರ್ ರವರು ಕಾರ್ಯಕ್ರಮ ನಿರ್ವಹಿಸಿದರು.