ವ್ಯಾಪಕ ಮಳೆ: ಸುಳ್ಯ, ಕಡಬ ತಾಲೂಕಿನ ಶಾಲಾ, ಕಾಲೇಜುಗಳಿಗೆ ಇಂದು(ಆ.2) ರಜೆ
ಸುಳ್ಯ: ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಸುರಿಯುತ್ತಿರುವ ಬಾರೀ ಮಳೆ ಹಿನ್ನಲೆಯಲ್ಲಿ ಇಂದು (ಆ. 2) ಇಂದು ಸುಳ್ಯ ಮತ್ತು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಘೋಷಿಸಿದ್ದಾರೆ.
ಸುಬ್ರಹ್ಮಣ್ಯ ಸೋಮವಾರ ಸುರಿದ ಧಾರಾಕಾರ ಮಳೆಗೆ ಕುಮಾರಧಾರ ಸ್ನಾನ ಘಟ್ಟ ಸಮೀಪದ ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಇಬ್ಬರು ಬಾಲಕಿಯರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಬಾಲಕಿಯರ ಮೃತದೇಹವನ್ನು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ರಾತ್ರಿ ಮಣ್ಣಿನಿಂದ ಹೊರತೆಗೆಯಲಾಯಿತು.
ಮೃತ ಬಾಲಕಿಯರನ್ನು ಶ್ರುತಿ (11) ಹಾಗೂ ಜ್ಞಾನಶ್ರೀ (6) ಎಂದು ಗುರುತಿಸಲಾಗಿದೆ. ಬಾಲಕಿಯರು ಸ್ಥಳೀಯ ವರ್ತಕ ಕುಸುಮಾಧರ ಮತ್ತು ರೂಪಶ್ರೀ ದಂಪತಿಯ ಮಕ್ಕಳು. ನಿನ್ನೆ ರಾತ್ರಿ 7.25ರ ಸುಮಾರಿಗೆ ಗುಡ್ಡ ಕುಸಿದಿದ್ದು, ರೂಪಶ್ರೀ 4 ತಿಂಗಳ ಮಗುವನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಓಡಿದ್ದರು. ಅವರ ಇನ್ನಿಬ್ಬರು ಮಕ್ಕಳಾದ ಶ್ರುತಿ ಹಾಗೂ ಜ್ಞಾನಶ್ರೀ ಮನೆಯಿಂದ ಹೊರಗೆ ಓಡಿ ಬರುವಷ್ಟರಲ್ಲಿ ಗುಡ್ಡ ಕುಸಿದಿತ್ತು. ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿದ್ದರು.
ಜಲಾವೃತಗೊಂಡು ಪಂಜ– ಸುಬ್ರಹ್ಮಣ್ಯ ರಸ್ತೆಯ ಸಂಪರ್ಕ ಕಡಿತ; ರಸ್ತೆ ಕಡಿತದಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ತೊಡಕುಂಟಾಗಿತ್ತು. ಮಾತ್ರವಲ್ಲದೆ ವಿದ್ಯುತ್ ಸಂಪರ್ಕ ಕಡಿತದಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಯಿತು. ನೀರಿನ ಹರಿವು ಕಡಿಮೆಯಾದ ಬಳಿಕ ಜೆಸಿಬಿ ತರಿಸಿ, ಬೆಳಕಿನ ವ್ಯವಸ್ಥೆ ಕಲ್ಪಿಸಿ ಮಣ್ಣನ್ನು ಸರಿಸುವಷ್ಟರಲ್ಲಿ ಮಕ್ಕಳಿಬ್ಬರ ಇಹಲೋಕ ತ್ಯಜಿಸಿದ್ದರು.
ಶ್ರುತಿ ಸುಬ್ರಹ್ಮಣ್ಯದ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಹಾಗೂ ಜ್ಞಾನಶ್ರೀ ಕುಮಾರಸ್ವಾಮಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಮಕ್ಕಳಿಬ್ಬರು ಶಾಲೆಯಿಂದ ಮನೆಗೆ ಮರಳಿದ ಬಳಿಕ ಆಟವಾಡಿಕೊಂಡಿದ್ದರು.
ಕುಸುಮಾಧರ ಅವರು ಸರ್ಕಾರಿ ಆಸ್ಪತ್ರೆ ಬಳಿ ಅಂಗಡಿಯನ್ನು ಹೊಂದಿದ್ದಾರೆ. ಮನೆ ಗುಡ್ಡದ ಪಕ್ಕದಲ್ಲೇ ಇದೆ. ಮತ್ತೊಂದು ಮನೆಯನ್ನು ಕಟ್ಟುವ ಸಲುವಾಗಿ ಅವರು ಗುಡ್ಡದ ತಳಭಾಗವನ್ನು ಅಗೆಸಿದ್ದರು.
ಭಟ್ಕಳ: ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಪಟ್ಟಣದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ತಾಲ್ಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ನೀಡಿ ಆದೇಶಿಸಿದ್ದಾರೆ.
ತಾಲ್ಲೂಕಿನ ಮುಟ್ಟೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿದ್ದು, ಮನೆಯೊಂದರ ಮೇಲೆ ಮಣ್ಣು ಬಿದ್ದಿದ್ದು ಸಂಪೂರ್ಣ ಹಾನಿಯಾಗಿದೆ.
ಪಟ್ಟಣ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಸುತ್ತಮುತ್ತಲಿನ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಸದ್ಯಕ್ಕೆ ಅಸಾಧ್ಯವಾಗಿದೆ. ಹಾಗಾಗಿ ಮುಂದಿನ ಸೂಚನೆಯ ತನಕ ಭಟ್ಕಳದ ಮೂಲಕ ಪ್ರಯಾಣ ಮಾಡುವುದು ಬೇಡ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿನಂತಿಸಿದ್ದಾರೆ.