ನಾಡಿನ ಮೊದಲ ಹಬ್ಬಕ್ಕೆ ವರುಣನ ಅಡ್ಡಿ-ಸುಬ್ರಹ್ಮಣ್ಯ ದೇವಳಕ್ಕೆ ಎರಡು ದಿನ ಭಕ್ತರ ಪ್ರವೇಶ ನಿಷೇಧ

ಸುಬ್ರಹ್ಮಣ್ಯ: ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ದರ್ಪಣತೀರ್ಥ ನದಿಯು ತುಂಬಿ ಹರಿದಿದ್ದು, ಕುಕ್ಕೆಯ ಆದಿಸುಬ್ರಹ್ಮಣ್ಯ ದೇವಳದ ಒಳಗೆ ನೀರು ಪ್ರವೇಶಿಸಿದ ಕಾರಣ ಕುಕ್ಕೆ ದೇಗುಲಕ್ಕೆ ಎರಡು ದಿನ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ

ಕುಕ್ಕೆ ದೇವಳದ ಸಮೀಪ ಇರುವ ದರ್ಪಣತೀರ್ಥ ನದಿಯ ಸ್ನಾನ ಘಟ್ಟವು ಮುಳುಗಡೆಯಾಗಿದೆ. ಸಮೀಪದ ರುದ್ರಪಾದ ಸೇತುವೆಯು ಜಲಾವೃತ ಗೊಂಡಿದೆ. ಈ ಮಧ್ಯೆ ಸುಬ್ರಹ್ಮಣ್ಯ- ಪುತ್ತೂರು- ಮಂಜೇಶ್ವರ ಅಂತರರಾಜ್ಯ ಸಂಪರ್ಕ ರಸ್ತೆಯ ಸೇತುವೆಯು ಮುಳುಗಡೆಯಾಗುವ ಸಾಧ್ಯತೆ ಇದೆ.

ದರ್ಪಣ ತೀರ್ಥ ನದಿಯ ಬಳಿಯ 15ಕ್ಕೂ ಹೆಚ್ಚೂ ಮನೆಗಳಿಗೆ ನೀರು ನುಗ್ಗಿದೆ.

ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಮಕಾರು ಎಂಬಲ್ಲಿ ಭಾನುವಾರ ತಡರಾತ್ರಿ ಹೊಳೆಯಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಹರಿದ ಪರಿಣಾಮ ಹೊಳೆಬದಿಯ 35ಕ್ಕೂ ಅಧಿಕ ಬೃಹತ್‌ ಮರಗಳು ನೀರು ಪಾಲಾಗಿವೆ. ಮರಗಳ ಗೆಲ್ಲು, ಸಿಪ್ಪೆಗಳು ಸೀಳಿದ್ದು ನೆರೆ ಪ್ರಮಾಣದ ಭೀಕರತೆಗೆ ಸಾಕ್ಷಿಯಾಗಿವೆ.

ಕಲ್ಮಕಾರಿನ ಕಡಮಕಲ್ಲು ಎಸ್ಟೇಟ್ ಮೇಲ್ಭಾಗದಲ್ಲಿ ಭೂಕುಸಿತ ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೂರು ಸೇತುವೆಗಳಿಗೂ ಹಾನಿಯಾಗಿದ್ದು, ಸಂಪರ್ಕ ಕಡಿತದ ಭೀತಿ ಎದುರಾಗಿದೆ. 

Leave a Reply

Your email address will not be published. Required fields are marked *

error: Content is protected !!