ಕೇಂದ್ರ, ರಾಜ್ಯ ಸರಕಾರಕ್ಕೆ ಕೊರೋನ ದೊಡ್ಡ ಗಿಫ್ಟ್ : ವಿನಯ್ ಕುಮಾರ್ ಸೊರಕೆ
ಉಡುಪಿ (ಉಡುಪಿ ಟೈಮ್ಸ್ ವರದಿ): ರಾಜ್ಯ ಬಿಜೆಪಿ ಸರಕಾರವು ಪ್ರತಿಪಕ್ಷ ಶಾಸಕರನ್ನು ಖರೀದಿಸಿ, ಕಳೆದ ಒಂದು ವರ್ಷದಲ್ಲಿ ಹಲವಾರು ಜನ ವಿರೋಧಿ ತಿದ್ದುಪಡಿ ಮಸೂದೆಗಳನ್ನು ಅಧಿವೇಶನದ ಚರ್ಚಿಸದೆ ಏಕಾಕಿ ಸುಗ್ರೀವಾಜ್ಞೆಗಳ ಮೂಲಕ ಹೇರಿರುವುದು ಮಾತ್ರವಲ್ಲದೆ, ಕೋರೊನ ಸಂಕಷ್ಟದ ನಡುವೆಯೂ ನೂರಾರು ಕೋಟಿ ಭ್ರಷ್ಟಾಚಾರ ನಡೆಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕೋರೋನ ಬಂದಿರುವುದೇ ದೊಡ್ಡ ಗಿಫ್ಟ್ ಎಂಬಂಥ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಕ್ರೋಶ ಭರಿತರಾಗಿ ತಿಳಿಸಿದರು.
ಕೆಪಿಸಿಸಿ ನಿರ್ದೇಶನದಂತೆ ರಾಜ್ಯ ಸರಕಾರದ ಜನವಿರೋಧಿ ನೀತಿ, ವೈಫಲ್ಯ, ಭ್ರಷ್ಟಾಚಾರಗಳನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ ಜನಧ್ವನಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೊರೋನ ಬಂದ ಬಳಿಕ ರಾಜ್ಯ ಮತ್ತು ಕೇಂದ್ರ ಸರಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಸಾವಿರಾರು ವಲಸೆ ಕಾರ್ಮಿಕರನ್ನು ಕೋರೊನ ನೆಪದಲ್ಲಿ ಬೀದಿಗೆ ಹಾಕಿದ ಸರಕಾರಗಳು, ಹಲವಾರು ಕಾರ್ಮಿಕರನ್ನು ಉಪವಾಸ ಬೀಳುವಲ್ಲಿ ಮತ್ತು ಎಷ್ಟೋ ಮಂದಿ ಕಾರ್ಮಿಕರು ಸಾಯು ವಲ್ಲಿಯೂ ಕಾರಣರಾಗಿದ್ದಾರೆ. ಕಾರ್ಮಿಕರಿಗೆ ರಕ್ಷಣೆ ಕೊಡುವ ಸಂವಿಧಾನ ತರುವ ಬದಲು, ಕಾರ್ಮಿಕರ ಕೆಲಸದ ಅವಧಿಯನ್ನು 4 ಗಂಟೆ ಹೆಚ್ಚುವರಿ ಮಾಡಿ ಅವರ ಮೇಲೆ ಹೊರೆ ಇಟ್ಟಿದೆ. ಪ್ರಾಕೃತಿಕ ಕೃತಕ ನೆರೆಯ ಸಂದರ್ಭದಲ್ಲಿ ಮನೆ ಮತ್ತು ಸರ್ವಸ್ವವನ್ನು ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರಕಾರ ಮತ್ತು ಸಚಿವರು ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಸಹಿತ ರಾಜ್ಯದ ಆಡಳಿತ ಜಿಲ್ಲಾಡಳಿತ ಗಳಲ್ಲೂ ಭ್ರಷ್ಟಾಚಾರದಲ್ಲಿ ಮುಳುಗಿವೆ. ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕ ಮಾಡಿ ಆದಷ್ಟು ಬೇಗ ಸರಕಾರದ ಭ್ರಷ್ಟಾಚಾರದ ತನಿಖೆ ನಡೆಸಬೇಕೆಂದು ಹಾಗೂ ಸರಕಾರ ತೆಗೆದುಕೊಂಡ ಎಲ್ಲ ಸುಗ್ರೀವಾಜ್ಞೆಗಳನ್ನು ವಾಪಸ್ಸು ಪಡೆಯಬೇಕೆಂದು ಸೊರಕೆ ಪ್ರತಿಭಟನಾಕಾರನ್ನುದ್ದೇಶಿಸಿ ಹೇಳಿದರು.
ಪ್ರತಿಭಟನಾ ಸಭೆಗಿಂತ ಮೊದಲು ಜಿಲ್ಲಾ ಕಾಂಗ್ರೆಸ್ ಭವನದಿಂದ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯು ಜಿಲ್ಲಾ ಕಾಂಗ್ರೆಸ್ ಭವನದಿಂದ ಆರಂಭವಾಗಿ ತಾಲ್ಲೂಕು ಆಫೀಸಿನ ಬಳಿ ಪ್ರತಿಭಟನಾ ಸಭೆ ನಡೆಸಿತು. ಬಳಿಕ ಪ್ರತಿಭಟನಾಕಾರರು ತಹಸೀಲ್ದಾರರ ಮೂಲಕ ಜನರ ಧ್ವನಿಯನ್ನು ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ತಲುಪಿಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಜ್ಯ ಸರಕಾರವು ಕೋರೋನ ಸಂಕಷ್ಟದ ಸಮಯದಲ್ಲಿ ಸೋಂಕು ತಡೆಗೆ ಅಗತ್ಯವಾದ ಔಷಧಿ, ವೈದ್ಯಕೀಯ ಉಪಕರಣಗಳಾದ ಪಿಪಿಇ ಕಿಟ್, ವೆಂಟಿಲೇಟರ್ ಹಾಗೂ ಸ್ಯಾನಿಟೈಸರ್ ಖರೀದಿಗಳಲ್ಲಿ ನೂರಾರು ಕೋಟಿಗಳ ಭ್ರಷ್ಟಾಚಾರವೆಸಗಿದೆ. ಕಾರ್ಮಿಕ ಕಾಯ್ದೆ ತಿದ್ದುಪಡಿ ಮಸೂದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಚರ್ಚಿಸದೆ ಜನರ ಮೇಲೆ ಹೇರಿರುವುದು ಆಘಾತಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಯುಆರ್ ಸಭಾಪತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿಶ್ವಾಸ್ ಅಮೀನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಪ್ರಮುಖರಾದ ಎಂಎ ಗಫೂರ್, ವೆರೋನಿಕಾ ಕರ್ನೇಲಿಯೋ, ದೇವಿಪ್ರಸಾದ್ ಶೆಟ್ಟಿ, ಜಿತೇಂದ್ರ ಫುಟಾರ್ಡೋ, ಭುಜಂಗ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಹರೀಶ್ ಕಿಣಿ, ರಮೇಶ್ ಕಾಂಚನ್, ಯತೀಶ್ ಕರ್ಕೇರ, ರೋಶನಿ ಒಲಿವೇರ, ಗೀತಾ ವಾಗ್ಲೆ, ಪ್ರಶಾಂತ್ ಜತ್ತನ್ನ, ಪ್ರವೀಣ್ ಪೂಜಾರಿ, ಡಾ ಸುನಿತಾ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ನರಸಿಂಹಮೂರ್ತಿ, ರಮಾದೇವಿ, ಚಂದ್ರಿಕಾ ಶೆಟ್ಟಿ, ಶಶಿಧರ್ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಪ್ರಭಾಕರ ಆಚಾರ್ಯ, ಮೀನಾಕ್ಷಿ ಮಾಧವ, ಗಣೇಶ್ ರಾಜ್ ಸರಳೇಬೆಟ್ಟು, ಗಣೇಶ್ ನೆರ್ಗಿ, ಲೂವಿಸ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.