ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಥಮ ದರ್ಜೆ ಸಹಾಯಕನಿಗೆ 4 ವರ್ಷ ಜೈಲು ಶಿಕ್ಷೆ, 1 ಕೋಟಿ ರೂ.ದಂಡ

ಮಂಗಳೂರು ಆ.1(ಉಡುಪಿ ಟೈಮ್ಸ್ ವರದಿ) :  ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಯು ಓಂಪ್ರಕಾಶ್ ಹೆಗ್ಡೆಗೆ 4 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ ದಂಡ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ  ನ್ಯಾಯಾಲಯ ತೀರ್ಪು ನೀಡಿದೆ.

ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ ಆರೋಪದ ಮೇಲೆ 2014 ರ ಜ.28 ರಂದು ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು

ಆರೋಪಿ ಯು ಓಂಪ್ರಕಾಶ್ ಹೆಗ್ಡೆ ಯನ್ನು ವಶಕ್ಕೆ ಪಡೆದು ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ಕೊಂಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ  ನ್ಯಾಯಾಧೀಶರಾದ  ಬಿ.ಬಿ. ಜಕಾತಿ ಅವರು ವಿಚಾರಣೆ ನಡೆಸಿ ಇಂದು ತೀರ್ಪು ನೀಡಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.

ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ  4 ವರ್ಷಗಳ ಸಾದಾ ಸಜೆ ಹಾಗೂ ರೂ 1,00,00,000 (ಒಂದು ಕೋಟಿ) ದಂಡ ವಿಧಿಸಲಾಗಿದೆ. ಆರೋಪಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 1 ವರ್ಷ ಕಾಲ ಸಾದಾ ಸಜೆ ಶಿಕ್ಷೆಯನ್ನು ಅನುಭವಿಸ ಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆರೋಪಿಯನ್ನು ಮಂಗಳೂರಿನ ಜಿಲ್ಲಾ ಕಾರಾಗ್ರಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಕರ್ನಾಟಕ ಲೋಕಾಯುಕ್ತ ಮಂಗಳೂರು ಇದರ ಪೊಲೀಸ್ ನಿರೀಕ್ಷಕ ಪ್ರಸ್ತುತ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್.ವಿಜಯ್‌ ಪ್ರಸಾದ್ ಅವರು ಆರೋಪಿಯ ವಿರುದ್ಧ ಸಮಗ್ರ ತನಿಖೆ ನಡೆಸಿ,  ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಕರ್ನಾಟಕ ಲೋಕಾಯುಕ್ತ ಮಂಗಳೂರು ಇದರ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!