ಕೋಟ: ನಿರುಪಯುಕ್ತ ತಂಪು ಪಾನೀಯ ಯಂತ್ರ ನೀಡಿ ಲಕ್ಷಾಂತರ ರೂ. ವಂಚನೆ
ಕೋಟ ಆ.1(ಉಡುಪಿ ಟೈಮ್ಸ್ ವರದಿ): ವ್ಯವಹಾರಕ್ಕಾಗಿ ಆರ್ಡರ್ ಮಾಡಿದ ಯಂತ್ರೋಪಕರಣದ ಬದಲು ನಿರುಪಯುಕ್ತ ಯಂತ್ರಗಳನ್ನು ನೀಡಿ ಲಕ್ಷಾಂತರ ರೂ. ವಂಚಿಸಿರುವುದಾಗಿ ಐರೋಡಿ ಗ್ರಾಮದ ಅಪ್ರಿನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ತಂಪು ಪಾನೀಯ ತಯಾರಿಕಾ ವ್ಯವಹಾರ ಮಾಡಿಕೊಂಡಿರುವ ಅಪ್ರಿನ್ ಅವರು ತಮ್ಮ ವ್ಯವಹಾರಕ್ಕಾಗಿ 23,36,400 ರೂ ಮೌಲ್ಯದ ಯಂತ್ರೋಪಕರಣಗಳನ್ನು ಪ್ಯಾಕ್ಟರಿಯೊಂದರಿಂದ ಖರೀದಿ ಮಾಡಿದ್ದರು.
ಆದರೆ ಅದರಲ್ಲಿ ಫ್ಯಾಕ್ಟರಿಯಿಂದ ನೀಡಿರುವ ಸುಮಾರು 8,50,000 ರೂ ಮೌಲ್ಯದ ಫಿಲ್ಲಿಂಗ್ ಮಿಶಿನ್ ಹಾಗೂ ಸುಮಾರು 4,40,000 ರೂ. ಮೌಲ್ಯದ ಚಿಲ್ಲರೆ ಮಿಶನ್ ಸರಿಯಾಗಿ ಕೆಲಸ ಮಾಡದೇ ನಿರುಪಯುಕ್ತವಾಗಿರುತ್ತದೆ. ಅಲ್ಲದೇ ಅಪ್ರಿನ್ ಅವರು ಆರ್ಡರ್ ಮಾಡಿದ ಮಿಶನ್ ಬದಲಾಗಿ ಅವರ ವ್ಯವಹಾರಕ್ಕೆ ಸಂಬಂಧಪಡದ ಬೇರೊಂದು ವಾಟರ್ ಪಿಲ್ಲಿಂಗ್ ಮಿಶನ್ ಕಳುಹಿಸಿ ಕೊಟ್ಟಿದ್ದಾರೆ. ಈ ಬಗ್ಗೆ ಆರೋಪಿಯ ಬಳಿ ಅನೇಕ ಬಾರಿ ಕೊಟೇಶನ್ ನೀಡಿದ ಮಿಶನ್ ನೀಡುವಂತೆ ಹಾಗೂ ಈಗಾಗಲೇ ಕಳುಹಿಸಿದ ಮಿಶನ್ ಹಿಂಪಡೆದು ಹಣ ಹಿಂತಿರುಗಿಸುವಂತೆ ಕೇಳಿಕೊಂಡಿದ್ದರು.
ಆದರೆ ಈ ವಿಚಾರವಾಗಿ ಜೂ.6 ರಂದು ಅಪ್ರಿನ್ ಅವರ ಗಂಡ ಇನ್ನೋರ್ವ ಆರೋಪಿಗೆ ಕರೆ ಮಾಡಿದಾಗ ಆತ ಅವಾಚ್ಯ ಶಬ್ದಗಳಿಂದ ಬೈದು ನಿಮ್ ಮಿಶನ್ ಬದಲಾಯಿಸಿ ನೀಡಲು ಆಗುವುದಿಲ್ಲ. ಇನ್ನೂ ಮುಂದೆ ಮಿಶನ್ ಬಗ್ಗೆ ಫೋನ್ ಮಾಡಿದಲ್ಲಿ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.ಅದರಂತೆ ಆರೋಪಿಗಳು ಹಣ ಪಡೆದು ವ್ಯವಹಾರಕ್ಕೆ ನಿರುಪಯುಕ್ತ ಯಂತ್ರೋಪಕರಣ ನೀಡಿ ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.