ಹಿಂದೂ ಮತ್ತು ಅಧಿಕಾರ ಎಂಬ ವಿಚಾರ ಬಂದಾಗ ನಾವು ಹಿಂದುತ್ವ ಆಯ್ಕೆ ಮಾಡುತ್ತೇವೆ- ಸುನಿಲ್ ಕುಮಾರ್
ಉಡುಪಿ, ಆ.1: ಸರಕಾರ ಬೇಕೋ ಹಿಂದುತ್ವ ಬೇಕೋ ಕೇಳಿದಾಗ ನಾವು ಸರಕಾರವನ್ನು ಬದಿಗಿಟ್ಟು ಹಿಂದುತ್ವವನ್ನು ಆಯ್ಕೆ ಮಾಡುತ್ತೇವೆ. ನಾವು ಇವತ್ತು ಹಿಂದುತ್ವವನ್ನೇ ಆಧಾರವಾಗಿ ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದೇವೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಕೊಲೆಯಾದ ಮಸೂದ್ ಮತ್ತು ಫಾಝಿಲ್ ಎಂಬವರ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡದಿರುವ ಕುರಿತು ಎದ್ದಿರುವ ವ್ಯಾಪಕ ಆಕ್ರೋಶದ ಮಾಧ್ಯಮದವರು ಗಮನಸೆಳೆದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಈ ಬಗ್ಗೆ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾನು ಸ್ಪಷ್ಟನೆ ಕೊಡಬೇಕಾದ ಅಗತ್ಯವಿಲ್ಲ. ಹಿಂದೂ ಮತ್ತು ಅಧಿಕಾರ ಎಂಬ ವಿಚಾರ ಬಂದಾಗ ನಾವು ಹಿಂದುತ್ವ ಆಯ್ಕೆ ಮಾಡುತ್ತೇವೆ. ಇದೇ ಕಾರಣಕ್ಕೆ ನಾವು ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿರುವುದು ಎಂದು ಸುನೀಲ್ ಕುಮಾರ್ ನುಡಿದರು.
ಪ್ರವೀಣ್ ಹತ್ಯೆ ಪ್ರಕರಣ: ಮಹತ್ವದ ಸುಳಿವು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುಕ್ತವಾದ ತನಿಖೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ರವಿವಾರ ಸಂಜೆ ವೇಳೆಗೆ ಮಹತ್ತರವಾದ ಸುಳಿವು ಸಿಕ್ಕಿದೆ ಎಂದು ಇಲಾಖೆ ಮೂಲಕ ಗೊತ್ತಾಗಿದೆ ಎಂದು ಸಚಿವರು ತಿಳಿಸಿದರು.
ನಾನು ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಹೋಗಿಲ್ಲ. ಎಡಿಜಿಪಿ ಅವರು ಇಲ್ಲೇ ಮೊಕ್ಕಾಂ ಹೂಡಿದ ಕಾರಣಕ್ಕೆ ಹಾಗೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪತ್ತೆ ಹಚ್ಚುವ ಕಾರ್ಯ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಯಾರು ಹಣಕಾಸಿನ ನೆರವು ನೀಡಿದ್ದಾರೆ ಹಾಗೂ ಯಾರು ನಿಜವಾದ ಕೊಲೆಗಡುಕರು ಎಂಬುದನ್ನು ಪೋಲಿಸ್ ಇಲಾಖೆ ಪತ್ತೆ ಹಚ್ಚುವ ವಿಶ್ವಾಸ ಇದೆ ಎಂದರು.
ಪ್ರತೀಕಾರದ ಕೊಲೆಗಳ ಕುರಿತು ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ಹತ್ಯೆಯನ್ನು ಯಾರು ಸಮರ್ಥಿಸಿಕೊಳ್ಳುವುದಿಲ್ಲ. ವೈಚಾರಿಕ ವಿಚಾರಗಳ ಚರ್ಚೆ ಮೂಲಕ ನಡೆಯಬೇಕೇ ಹೊರತು ಹಿಂಸಾರೂಪದಲ್ಲಿ ಯಾವುದೂ ನಡೆಯಬಾರದು. ಆದರೆ ಜಿಹಾದಿ ಹಿಂಸಾಚಾರ ಕೇವಲ ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಅದು ದೇಶದ ಹಲವು ರಾಜ್ಯ ಹಾಗೂ ರಾಜ್ಯದ ಹಲವು ಜಿಲ್ಲೆಗಳಿಗೆ ವಿಸ್ತರಿಸಿರುವುದು ನಾವು ಕಂಡಿದ್ದೇವೆ. ಈ ಕುರಿತಂತೆ ಆ ನಿರ್ದಿಷ್ಟ ಸಮುದಾಯದವರು ಯೋಚಿಸಬೇಕು ಎಂದರು.
ಪಕ್ಷದ ಕಾರ್ಯಕರ್ತರ ಕೋಪ, ಹಿಂದುತ್ವ ಸಂಘಟನೆಗಳ ಆಕ್ರೋಶದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾರ್ಯಕರ್ತರ ಕೋಪವನ್ನು ನಾನು ಎಂದೂ ಸರಿಯಲ್ಲ ಅಂತ ಹೇಳಿಲ್ಲ. ಒಂದು ಮನೆಯಲ್ಲಿ ಅಪಸ್ವರಗಳು ಇದ್ದೇ ಇರುತ್ತವೆ. ತಂದೆ ತಪ್ಪು ಮಾಡಿದರೆ ಮಗ , ಮಗ ತಪ್ಪು ಮಾಡಿದರೆ ತಂದೆ ಹೇಳಲೇಬೇಕು. ಇದು ಭಿನ್ನಾಭಿಪ್ರಾಯ ಅಲ್ಲ, ಕಾರ್ಯಕರ್ತರ ಭಾವನೆಯನ್ನು ನಾವು ಸ್ವೀಕರಿಸಿದ್ದೇವೆ. ಮತ್ತೆ ನಾವು ಆ ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತೇವೆ. ಆಕ್ರೋಶದ ತೀವ್ರತೆ ಕಾರಣಕ್ಕೆ ರಾಷ್ಟ್ರೀಯತೆಯಿಂದ ವಿಮುಖ ಆಗುವ ಪ್ರಶ್ನೆಯೇ ಇಲ್ಲ ಎಂದರು.