ಸಿದ್ದರಾಮೋತ್ಸದ ಯಶಸ್ವಿಗೆ ಕರೆ- ಉಡುಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎ.ಸಂಕಪ್ಪ
ಉಡುಪಿ ಆ.1 (ಉಡುಪಿ ಟೈಮ್ಸ್ ವರದಿ): ಆಗಸ್ಟ್ 3 ರಂದು ದಾವಣಗೆರೆಯ ಪ್ಯಾಲೆಸ್ ಮೈದಾನದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್‍ನ ಹಿಂದುಳಿದ ವರ್ಗಗಳ ಅಧ್ಯಕ್ಷ ಎ. ಸಂಕಪ್ಪ ಅವರು ಕರೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಭರಪೂರ ಕೊಡುಗೆಗಳನ್ನು ನೀಡಿ ಧೀಮಂತ ನಾಯಕರೆನಿಸಿಕೊಂಡಿದ್ದಾರೆ. 2013 ರಿಂದ 18 ರ ವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಂದೇ ಬಡವರ ಪರ ಕಾಳಜಿ ಹೊಂದಿ, ಪ್ರಮಾಣ ವಚನ ಸ್ವೀಕರಿಸಿದ ಒಂದೇ ಗಂಟೆಯಲ್ಲಿ ಅನ್ನಭಾಗ್ಯದ ಯೋಜನೆ ಘೋಷಿಸಿ ಜನಪರ ನಾಯಕರೆನಿಸಿಕೊಂಡಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರ ಮುಖ್ಯಮಂತ್ರಿ ಎನಿಸಿದ್ದ ಇವರ ಈ ಅನ್ನ ಭಾಗ್ಯ ಯೋಜನೆ ಕೋವಿಡ್ ಸಂದರ್ಭದಲ್ಲಿ ಕೃಷಿ ಮತ್ತು ಕಾರ್ಮಿಕ ವರ್ಗ, ಹಿಂದುಳಿದ ವರ್ಗದ ಜನತೆಗೆ ಯೋಜನೆ ವರದಾನವಾಗಿ ಸಹಕಾರಿಯಾಗಿತ್ತು.
ಇಷ್ಟು ಮಾತ್ರವಲ್ಲದೆ ತಮ್ಮ ಅಧಿಕಾರಾವಧಿಯ ಉದ್ದಕ್ಕೂ ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್ ನಂತಹ ನೂರಾರು ಜನಪರ ಯೋಜನೆಗಳನ್ನು ಜನತೆಗೆ ನೀಡಿ ಹಿಂದುಳಿದ ವರ್ಗದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆ.3 ರಂದು ನಡೆಯುವ ಸಿದ್ದರಾಮೋತ್ಸ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲೆಯಿಂದ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.