ಫಾಝಿಲ್ ಹತ್ಯೆಯ ಹಿಂದೆ ರೌಡಿಶೀಟರ್ ಸುಹಾಸ್ ಶೆಟ್ಟಿ ತಂಡದ ಕೈವಾಡ?

ಮಂಗಳೂರು ಆ.1: ಇತ್ತೀಚೆಗೆ ಸುರತ್ಕಲ್ ನಲ್ಲಿ ನಡೆದ ಮಹಮ್ಮದ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಕೃತ್ಯದ ಹಿಂದೆ ರೌಡಿಶೀಟರ್ ಸುಹಾಸ್ ಶೆಟ್ಟಿ ತಂಡದ ಕೈವಾಡ ಇದೆ ಎನ್ನಲಾಗುತ್ತಿದೆ.

ಕೃತ್ಯಕ್ಕೆ ಬಳಸಿದ್ದ ಕಾರು ಉಡುಪಿ ಜಿಲ್ಲೆಯ ಇನ್ನಾ ಗ್ರಾಮದ ಕಡೆಕುಂಜದಲ್ಲಿ ಭಾನುವಾರ ಪತ್ತೆಯಾಗಿತ್ತು. ಈ ಕಾರನ್ನು ಕೃತ್ಯಕ್ಕೆ ಬಾಡಿಗೆಗೆ ನೀಡಿದ್ದ ಅರೋಪಿ ಅಜಿತ್ ಕ್ರಾಸ್ತಾನನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಈ ವೇಳೆ ಬಂಧಿತ ಆರೋಪಿ ನೀಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಸುಹಾಸ್ ಶೆಟ್ಟಿ ಗ್ಯಾಂಗ್ ನ ಸದಸ್ಯರ ಹಿಂದೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಡಿಜಿಪಿ ಪ್ರವೀಣ್ ಸೂದ್ ಅವರು ಮಂಗಳೂರಿಗೆ ಬಂದಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹತ್ಯೆ ಪ್ರಕರಣಗಳ ತನಿಖೆಯ ಪ್ರಗತಿಯ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇನ್ನು ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು , ‘ಫಾಝಿಲ್ ಹತ್ಯೆ ಪ್ರಕರಣವನ್ನೂ ಭೇದಿಸಿದ್ದೇವೆ, ಸದ್ಯದಲ್ಲೆ ಆರೋಪಿಗಳನ್ನು ಬಂಧಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಇನ್ನು ರೌಡಿಶೀಟರ್ ಸುಹಾಸ್ ಶೆಟ್ಟಿ ತಂಡವು ಬಜ್ಪೆಯಲ್ಲಿ ನಡೆದ ಕೊಲೆ ಕೃತ್ಯದಲ್ಲಿ ಹಾಗೂ ಇನ್ನೊಂದು ಕೊಲೆ ಕೃತ್ಯದಲ್ಲಿ ಈ ಹಿಂದೆ ಭಾಗಿಯಾಗಿತ್ತು. ಆ ತಂಡದ ಸದಸ್ಯರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕಿದ್ದು ಕೆಲವರನ್ನು ವಶಕ್ಕೂ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!