ಉಡುಪಿ: ಪ್ರೊ.ವಿ.ಅರವಿಂದ ಹೆಬ್ಬಾರ್’ರಿಗೆ ಅಮೇರಿಕಾದ ಫ್ಲೋರಿಡಾದ ಗೌರವ ಡಾಕ್ಟರೇಟ್ ಪ್ರದಾನ
ಉಡುಪಿ: ಅಮೇರಿಕಾದ ಫ್ಲೋರಿಡಾದಲ್ಲಿರುವ ಸಾನ್ ಫರ್ಡ್ ನ ಶ್ರೀ ವಿದ್ಯಾ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಫಾರ್ ವೇದಿಕ್ ಸಾಯನ್ಸ್, ಇವರು ತಮ್ಮ 2ನೇ ಘಟಿಕೋತ್ಸವದಂದು ತಮ್ಮ ಬೆಂಗಳೂರು ಶಾಖೆ, ಶ್ರೀವಿದ್ಯಾ ವಿಶ್ವ ಸಂಶೋಧನ ಪ್ರತಿಷ್ಠಾಪನಮ್ ಇವರ ಮೂಲಕ ಉಡುಪಿಯ ಪ್ರೊ.ವಿ.ಅರವಿಂದ ಹೆಬ್ಬಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದ್ದಾರೆ.
ಬೆಂಗಳೂರಿನ ಜಯರಾಮ ಸೇವಾ ಮಂಡಳಿಯಲ್ಲಿ ಜರುಗಿದ ಈ ಸಮಾರಂಭ ದಲ್ಲಿ ಬೇಲಿ ಮಠದ ಶ್ರೀಶಿವರುದ್ರ ಮಹಾಸ್ವಾಮಿ ಯವರು ಮತ್ತು ನಿವೃತ್ತ ಹೈಕೋರ್ಟ್ ನ್ಯಾಯಧೀಶ ಎನ್ ಕುಮಾರ್ ಅವರು ಪದವಿ ಪ್ರದಾನ ಕಾರ್ಯಕ್ರಮ ನಿರ್ವಹಿಸಿದರು. ಕುಲಪತಿಗಳಾದ ಡಾ.ಜೆ ಶ್ರೀನಿವಾಸ ಮೂರ್ತಿ ಮತ್ತು ಕುಲಸಚಿವರಾದ ಡಾ.ಎಸ್ ಆರ್ ನರಸಿಂಹ ಮೂರ್ತಿಯವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೇದ, ಜ್ಯೋತಿಷ್ಯ, ತಂತ್ರ, ಆಗಮ, ಸಂಗೀತ, ಸಂಗೀತ ಶಾಸ್ತ್ರ ಮತ್ತು ಭರತ ನಾಟ್ಯದಲ್ಲಿ ಅಪ್ರತಿಮ ಸಾಧನೆಗೈದ ಏಳು ವಿದ್ವಾಂಸರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು. ಹಾಗೆಯೇ ಏಳು ಜನ ವಿದ್ವಾಂಸರಿಗೆ ಮಹೋಪಾಧ್ಯಯ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಡಾ. ರಾ. ಸ ನಂದಕುಮಾರ್ ಅವರಿಗೆ ಸಂಗೀತ ಶಾಸ್ತ್ರ ವಾರಿಧಿ ಎಂಬ ಬಿರುದು ನೀಡಿ ಗೌರವಿಸಲಾಯಿತು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಗೀತ ಶಾಸ್ತ್ರದಲ್ಲಿ ಸಾಧನೆ ಗೈದ ಪ್ರೊ. ವೀ ಅರವಿಂದ ಹೆಬ್ಬಾರರಿಗೆ ಒದಗಿಬಂದ ಈ ಡಾಕ್ಟರೇಟ್ ಪದವಿ ನಮ್ಮ ಉಭಯ ಜಿಲ್ಲೆಗಳಿಗೆ ಸಂದ ಪ್ರಥಮ ಗೌರವ.